ಎಪ್ಪತ್ತೊಂದು

 

ನಷ್ಟವಾಗುವ ಕಾಯಕ್ಕೆ| ಇಷ್ಟು ಹಂಬಲವೇತಕ್ಕೊ|

ಸೃಷ್ಟಿಗೊಡೆಯ ಶ್ರೀಕೃಷ್ಣನ | ಇಷ್ಟದಿಂದ ಭಜಿಸೊ ಮನವೆ || ಪ ||

ಸೃಷ್ಟಿಗೆ ಬಂದಿಹ ಮೇಲೆ ಬಲು| ಕಷ್ಟವೆನಲು ಬೇಡ ಮುದ್ದು|

ಕೃಷ್ಣನ ನೆನೆಯುತ ಸುಖ ಸಂ|ತುಷ್ಟಿಯ ಪಡೆಯೊ ನೀ ಮನವೆ|ಅ.ಪ||

 

ಅಲ್ಪತನ ಬಿಟ್ಟು ಸಾಗರ | ತಲ್ಪ ಶ್ರೀರಂಗ ಶಯನನ |

ಸ್ವಲ್ಪದಿಂದ ನೆನೆದರೂ | ಎಲ್ಲ ಕಾಮನೆ ಸಲಿಸಿ ವರ |

ಕಲ್ಪತರುವಿನ ತೆರದಿ ತಾ | ನೆಲ್ಲರ ಕಾಯುವೆನೆಂದು |

ನಿಲ್ಲದೆ ನಿರತದಿ ಹರಿ ತಾ| ನೊಳ್ಳಿತ ಮಾಡುವ ಕಾಣಿರೊ||ನಷ್ಟ||

 

ಅಗ್ಗವಾದ ಜೀವನಕ್ಕೆ | ಒಗ್ಗಿಕೊಂಡು ಬಹಳ ಬಳಲಿ |

ಮಗ್ಗುಲಿಗೆ ಹೊರಳಿಕೊಂಡು ನಿ | ತಗ್ಗಿನೊಳಗೆ ಬಿದ್ದೆಯಲ್ಲೊ|

ಕೊಗ್ಗತನ ತೋರದಲೆ ಶಿರ | ಬಗ್ಗಿ ಹರಿಯ ಪದ ಜಪಿಸಲು |

ಹಿಗ್ಗುತಲಿ ಪರಮ ಗತಿ ತಾ |ನೆಗ್ಗಿಲ್ಲದೆ ಕರುಣಿಸುವನು ||ನಷ್ಟ||

 

ಗದ್ದಿಗೆಗೆ ಆಸೆವಡೆಯುತ | ಕದ್ದು ಕನಕವ ಕೂಡಿಟ್ಟು |

 ಬಿದ್ದು ನರಕದಿ ಕೆಟ್ಟೆನೈ | ಮುದ್ದು ಮುಖ ಮಂದಹಾಸನೆ|

 ಬದ್ದನಾಗಿ ನಿನ್ನ ನೆನೆಯೆ | ಹದ್ದನೇರುತ ಬಳಿ ಬಂದು |

ಉದ್ದರಿಸಿ ಸಲಹಲು ಬೇಕು | ಸಿದ್ಧ ಮಾತರೀಶ ವಿಠಲ ||ನಷ್ಟ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅರುವತ್ತಾರು

ಅರವತ್ತೇಳು