ಒಂದು

 ಗುರಿತೋರಿ ನಡೆಸುವರಿನ್ನೇತರರ ಕಾಣೆನೊ ಹರಿಯೇ.||ಪ||

ಕರುಣಾಕರ ನೀನೊಬ್ಬನೇ ಜಗದಿ ಇರಲಾಗಿ.||ಅ.ಪ||


ನೂರು ವರುಷವ ನೀನಿತ್ತರೆ 

ಯಾರು ಎನ್ನ ಒಯ್ಯಲಾರರೊ

ಮೂರು ದಿನವಿತ್ತಿರಲು ಜಗದಿ

ಸಾರಿ ಉಳಿಸಿದವರನು ತೋರು||ಗುರಿತೋರಿ||


ಅರಸನಾಗುವ ಮನವಿದ್ದಡೆ

ಆರೆನಿತು ನಿಲ್ಲಿಸುವರಯ್ಯ

ಕರದಿ ಕಪ್ಪರವ ಕೊಡಲಾಗಿ

ಮೆರೆಸಿದರಿಲ್ಲ ಧಾರುಣಿಯೊಳು||ಗುರಿತೋರಿ||


ನರನಾಗಿ ಪುಟ್ಟಿರಲು ನಾಮ

ವರವಾಗಿ ಸಿಕ್ಕಿಹುದು ನಿನ್ನ

ಕರುಣಾರಸವನು ಮನದೊಳಗೆ

ಸುರಿಸಯ್ಯ ಶರಣಜನಪಾಲ.||ಗುರಿತೋರಿ||


ಸಾರಿ ಸಾರಿ ಪೇಳುವೆನಯ್ಯ

ನಾರಾಯಣನ ನಾಮಜಪವು

ದುರಿತಭವ ತಾಪತ್ರಯವನು

ಪರಿಹರಿಪುದು  ಅರೆಗಳಿಗೆಯೊಳು||ಗುರಿತೋರಿ||


ಉರಗಶಯನನ ನಂಬಿದರ್ಗೆ

ಉರಿದುಹೋದುದು ಪಾಪಂಗಳು

ಕರೆಕರೆದು ಮುಕ್ತಿ ಕೊಡುವಾತ

ವರದ ಮಾತರೀಶ ವಿಠ್ಠಲ.||ಗುರಿತೋರಿ||


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು