ಮೂವತ್ತೊಂದು

ಆವ ದೋಷಗಳ ಪಡೆದೆನೊ|

ಭವಬಂಧನದೊಳಗೆ ಸಿಲುಕಿ|

ದೇವ ಹರಿಯೊಬ್ಬನಲ್ಲದೆ|

ಕಾವರೇತರರನು ಕಾಣೆ ||ಆವ||


ಕಾಮವೆಂಬುದು ಮೆರೆದು ಬಲು|

ತಾಮಸವನು ಮಾಡಿಕೊಂಡು|

ಸೋಮರಸದಾ ಅಮಲಿನಲಿ|

ರಮಿಸಿದೆನು ನಾನನುದಿನವು||ಆವ||


ಕ್ರೋಧವದು ತಾರಕಕ್ಕೇರಿ|

ಬಾಧಿಸುತಿಹುದು ಎನಗಿಂದು|

ಸಾಧನೆ ಸುಟ್ಟು ಕರಕಾಗಿ|

ರೋಧಿಸುತ ನಾನನುದಿನವು||ಆವ||


ಲಾಭದಭಿರುಚಿಯೊಳಗೆ ಬಲು|

ಲೋಭಿಯಾದೆನೀ ಭವದಲಿ|

ಅಭಿಜಾತ ಕೃಪಣನೆನಿಸಿ|

ಉಬ್ಬಿದೆನು ನಾನನುದಿನವು||ಆವ||


ಮೋಹ ಪಾಶಕೆ ನಾ ಸಿಲುಕಿ|

ಬಹು ನೊಂದಿಹೆನು ದುರ್ಜನರ|

ಸಹವಾಸವೆನಗೆ ಮುಳುವಾಗಿ|

ಕಹಿಯಾದೆ ನಾನನುದಿನವು||ಆವ||


ಮದವೇರಿದಾ ಮನಸಿನಲಿ|

ಸದಾ ಅಹಂಕಾರ ಪಡುತ|

ಬದುಕು ಬೆಂದಿತು ಮರುಗಿ ಬಲು|

ವೇದನೆಯೊಳಗೆ ಅನುದಿನವು||ಆವ||


ಮಚ್ಚರವು ಅತಿಯಾಗಿ ಕಡು|

ಹುಚ್ಚನಂತೆಯೆ ಅಲೆದಲೆದು|

ಮೆಚ್ಚಿದನೆಲ್ಲ ವಿಕ್ರಯಿಸಿ|

ತುಚ್ಚನಾದೆನೆ ಅನುದಿನವು||ಆವ||


ಆರು ವೈರಿಗಳನು ಮೆಟ್ಟಿ|

ಬರುವ ಸಂಕಟಗಳ ಕುಟ್ಟಿ|

ಸಿರಿ ಮಾತರೀಶ ವಿಠಲನು|

ಪೊರೆಯಲುಬೇಕು ಅನುದಿನವು||ಆವ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು