ಮೂವತ್ತೈದು

ಹರಿಕರುಣೆ ಎಂಬುದನು|

ವರವಾಗಿ ಪಡೆದವರು|

ಹರಿಶಾಪ ಎನುವಂಥ|

ಪರಿತಾಪಕೊಳಗಾಗದಿರಲಿ||ಪ||

ಸರಿಯರಿತು ನಡೆವವರು|

ಹರಿಪದ ಸೇರುತಿರಲಿ||ಅ.ಪ||


ಸೇರುವುದು ಹುಟ್ಟುತಲೆ ಹರಿವರವು|

ಮರಣದಲಿ ದೂರವಿರೆ ಹರಿಶಾಪ|

ಧಾರುಣಿಯನಾಳುವುದು ಹರಿವರವು|

ಶರಣರ ಪೊರೆಯದಿರಲು ಹರಿಶಾಪ||ಹರಿ||


ವರಸತಿಯ ಕೈಪಿಡಿಯೆ ಹರಿವರವು|

ಪರಸತಿಯ ಬಯಸುವುದು ಹರಿಶಾಪ|

ಕೆರೆಕಟ್ಟೆ ಕಟ್ಟುವುದು ಹರಿವರವು|

ನೀರನೀಯದೆ ಇರಲು ಹರಿಶಾಪ||ಹರಿ||


ಗಾಡಿದವಸ ತರುವುದು ಹರಿವರವು|

ಬೇಡಿದವಗಿಕ್ಕದಿರೆ ಹರಿಶಾಪ|

ತುಡುಕಿದರೆ ಧುರದಲ್ಲಿ ಹರಿವರವು|

ಓಡಿಪೋದರೆ ರಣದಿ ಹರಿಶಾಪ||ಹರಿ||


ಎಲ್ಲ ವೈಭವ ಬರಲು ಹರಿವರವು|

ಕಳ್ಳತನ ಮಾಡುವುದು ಹರಿಶಾಪ|

ಒಳ್ಳೆ ವಿದ್ಯೆಯ ಪಡೆಯೆ ಹರಿವರವು|

ಬಲ್ಲ ಗುರುಗಳ ಜರೆಯೆ ಹರಿಶಾಪ||ಹರಿ||


ಹೆತ್ತವರ ಸಲಹುವುದು ಹರಿವರವು|

ಮತ್ತವರ ಬಡಿಯುವುದೆ ಹರಿಶಾಪ|

ಮಾತರೀಶವಿಠಲನು ಹರಿವರವು|

ಸತತ ನುತಿಸದೆಯಿರಲು ಹರಿಶಾಪ||ಹರಿ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು