ಅರುವತ್ತ ಐದು
ಹೆಮ್ಮೆ ಪಡುವುದ್ಯಾತಕೋ? ಕು-|
ಕರ್ಮಭರಿತ ನಷ್ಟ ಕಾಯಕೆ|
ಮರ್ಮ ತಿಳಿದು ನಡೆಯೊ ಸಾವೆಂಬ|
ಗುಮ್ಮ ಅಣಕಿಸುತಲಿರಲಾಗಿ||ಪ||
ಚೆಂದದ ಜೀವವಿದೆಂದು|
ಗಂಧ ಪನ್ನೀರ ಪೂಸಿ|
ಅಂದದಲಿರುವೆಯೆಂದರೆ|
ಬಂದು ನಿಲುವ ಯಮಭಟನು||ಹೆಮ್ಮೆ||
ಕುಂದು ಬಾರದಿರಲೆಂದು|
ಸಂದು ಸಂದಿಲಿ ಅವಿತೆಡೆ|
ಮಂದಮತಿಯೆ ಈ ಅಸುವ|
ಮುಂದೊತ್ತಲಾರೆ ತಿಳಿಯೊ|| ಹೆಮ್ಮೆ||
ಇಂದು ನಾಳೆ ನಾಡಿದ್ದು|
ಎಂದಾದರೊಂದು ದಿನದಿ|
ಬಂದೆರಗುವ ಪರಗತಿಗೆ|
ನಿಂದು ಕಾಯೊ ಮೂಢಾತ್ಮ||ಹೆಮ್ಮೆ||
ಇಂದು ಮಾತರೀಶನನು|
ಚೆಂದದಿಂದ ನೆನೆಯಲಿಕೆ|
ಇಂದಿರಾ ರಮಣನು ಆ-|
ನಂದದಲಿ ಪೊರೆವ ಕಾಣೊ||ಹೆಮ್ಮೆ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ