ಐವತ್ತೊಂಬತ್ತು
ದಾಸನಾಗ ಬೇಕೆಂಬ ಹಂಬಲವದೇಕೊ|
ವಾಸುದೇವನೆಂಬೊಂದು ನಾಮವೇ ಸಾಕು|
ದೋಷಾತೀತಂಗಳನು ಹಿಂಗಿಸುವುದಕೆ||ಪ||
ಏಸು ಜನ್ಮ ಪಡೆದು| ಘಾಸಿಗೊಂಡೆನಯ್ಯ|
ವಾಸಿಯಾಗದ ಭವ|ರಾಶಿ ದೋಷದಿಂದ|
ಹುಸಿಯಾದ ಜೀವ|ದಾಸೆಗೆ ನಾ ಬಿದ್ದು|
ಮೋಸಹೋದೆನಯ್ಯ|ಶ್ರೀಶ ನಿನ್ನಮರೆತು||೧||
ಸೆಂಡಿಯೊಂದ ಬಿಟ್ಟು|ಮುಂಡನವನು ಮಾಡಿ|
ಗಿಂಡಿಗಲಶ ತಿಕ್ಕಿ|ಮಿಂದು ಮಡಿಯುಟ್ಟು|
ಉಂಡೆ ನಾಮ ಬಳಿದು|ಭಂಡತನವ ತೋರಿ|
ಕಂಡ ಮನೆ ಪೊಕ್ಕು| ಉಂಡು ತಿರುಗುವುದಕೆ||೨||
ಹರಿಯ ನಾಮ ಪಾಡು|ವರನು ಅರ್ತಿಯಿಂದ|
ಪರಮ ಪದವಿಯಿತ್ತು|ಬಿರುದ ಕೊಡುವ ನಮ್ಮ|
ಸರಸಿಜನಾಭ ಶ್ರೀ|ಕೃಷ್ಣ ಮಾತರೀಶ|
ವರದ ವಿಠಲ ರಾಯ|ಕರೆದು ಮುಕ್ತಿ ಕೊಡಲು||೩||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ