ಆರು
ತನುವಿನೊಳಗೆ ತಮವನುದಿನವಿದ್ದರೆ|
ಹಣತೆ ಸಾವಿರ ಹಚ್ಚಿದರೇನು ಫಲ?
ಮನದೊಳು ಹರಿವಾಸ ಮಾಡದಿದ್ದರೆ|
ಗುಣಂಗಳನೇಕವಿದ್ದರೇನು ಫಲ?
ನೂರು ವಿದ್ಯೆಯ ಕಲಿತು|
ಕರುಣೆಯೆಂಬುದಿರದಿರಲೇನು ಫಲ?
ಮಾರುದಾರಿಯ ದಾಟಿ|
ಊರ ತಾ ಸೇರದಿರಲೇನು ಫಲ?
ಬೆಳೆಯನು ಬೆಳೆಯಲಾಗಿ|
ಕಳೆಯೊಂದ ಕೀಳದಿರಲೇನು ಫಲ?
ತೊಳೆಯದಿರೆ ಮನದ ಕೊಳೆ|
ಹೊಳೆಯೊಳು ಮುಳುಗು ಹಾಕಲೇನು ಫಲ?
ಹತ್ತು ಬಂಧುಗಳಿರಲು|
ಎತ್ತಿಕೊಂಡವರ ಮರೆತರೇನು ಫಲ?
ಮುತ್ತು ಕೊಡುವಳ ಕಂಡು|
ತುತ್ತು ಕೊಟ್ಟಳ ಮರತರೇನು ಫಲ?
ಎಲ್ಲ ಜೀವವ ತಿಂದು|
ಸೊಲ್ಲು ವೇದಗಳ ಓದಲೇನು ಫಲ?
ಕಳ್ಳತನವನು ಮಾಡಿ|
ಒಳ್ಳೆಯ ದಾನ ಮಾಡಲೇನು ಫಲ?
ಬಿರಿದ ದೋಣಿಯನೇರಿ|
ಭರದ ನದಿಯನು ದಾಂಟಲೇನು ಫಲ?
ಕೊರಳು ನದಿಯೊಳ್ ಮುಳುಗಿ|
ಬಾರದಿದ್ದರೆ ಈಜಲೇನು ಫಲ?
ಯತಿ ಮಧ್ವಪತಿಯನ್ನು|
ಸ್ತುತಿಸದ ಜನ್ಮವಿದ್ದರೇನು ಫಲ?
ಕತೃ ಹರಿಯ ನೆನೆಯದೆ|
ನಿತ್ಯಮೋಕ್ಷವ ಬೇಡಲೇನು ಫಲ?
ಸತ್ವ ಸಾರದಿಂದಲಿ|
ಅತಿಹಿತವ ಮಾಡಿ ಸತತ ಪೊರೆವುದು|
ನಿತ್ಯ ಮೂರುತಿ ನಮ್ಮ|
ಮಾತರೀಶ ವಿಠಲನ ನಾಮಬಲ.|
.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ