ಇಪ್ಪತ್ತೆರಡು
ಹತ್ತು ಜಾತಿಯ ಹೂವ ತನ್ನಿರೆ||ಪ||
ಹತ್ತವತಾರ ತಳೆದು ಮೆರೆದವನ
ನೆತ್ತಿಯ ಮೇಲಿಡಲುತ್ತಮವಾದ ಹೂವ ತನ್ನಿ||ಅ.ಪ||
ಎಲ್ಲ ಭಕ್ತರ ಮನವ ಸಲ್ಲಿಸಿ|
ಬಲ್ಲ ಬಯಕೆಯ ಮೆಲ್ಲನೆಯಿತ್ತ|
ಮಲ್ಲರ ಮಲ್ಲಗೆ ಸಿರಿ ಮಲ್ಲಿಗೆ ಹೂವ ತನ್ನಿ||೧||
ಗುಂಪು ಗೊಲ್ಲರ ಕೂಡಿ ಒಪ್ಪುವ|
ಇಂಪುಗೊಳಲಾ ನುಡಿಸುವವಂಗೆ|
ಕಂಪು ಸೂಸುವ ಕಾಡ ಚಂಪಕ ಹೂವ ತನ್ನಿ||೨||
ಮಾಧವಗೆ ಮಧುಸೂದನಗೆ|
ಸಾಧುಜನರೆದೆಯೊಳು ನೆರೆದವಗೆ|
ಉದಯ ಕಾಲದಿ ಒದಗಿ ಕೇದಗೆ ಹೂವ ತನ್ನಿ||೩||
ಭವಭಯ ಕಳೆವ ದೇವರ ದೇವ|
ತವ ಪಾದಕೆ ಮೋದದಿ ಎರಗುವೆ|
ಸಾವಕಾಶದಿ ಬನ್ನಿ ತಾವರೆ ಹೂವ ತನ್ನಿ||೪||
ಕರವ ಮುಗಿವೆ ಬೆಳಗಾಯಿತೇಳು|
ದರುಶನಗೊಡುವ ಉರಗಶಯನಾ|
ಕರುಣಾಕರನಿಗೆ ಕರವಿರ ಹೂವ ತನ್ನಿ||೫||
ಬೇರೆಂದು ಎಣಿಸದೆ ಪೊರೆಯುವುದು|
ಗಾರುಡಿಗ ಜಗದ ಭಾರಕಳೆವ|
ಉರಗಶಯನನಿಗೆ ಸುರಗಿಯ ಹೂವ ತನ್ನಿ||೬||
ಅಂಜದಲೆ ಭಜಿಸುವಾ ಜನರಿಗೆ|
ನಂಜನು ಮಂಜಿನಂತೆ ಕರಗಿಸಿ|
ಇಂಗಿಸುವ ದೇವನಿಗೆ ರಂಜೆಯ ಹೂವ ತನ್ನಿ||೭||
ತಾಪಸರೆಲ್ಲರು ಕೂಡಿ ಬಂದು|
ಅಪವಾದ ರಹಿತನ ಕೊಂಡಾಡಿ|
ಉಪಾಯದಿಂದಲಿ ಚೆಂಕೇಪಳ ಹೂವ ತನ್ನಿ||೮||
ನರಸಿಂಹನ ರೂಪದಿ ಬಂದಾ|
ಅರವಿಂದನಾಭ ಮುಕುಂದಗೆ|
ಊರಕೇರಿಯೊಳಗಿನ ಗೋರಂಟಿ ಹೂವ ತನ್ನಿ||೯||
ವೀರ ಮಾತರೀಶ ವಿಠಲನಾ|
ಬಾರಿಬಾರಿಗೂ ನಿರತ ನೆನೆದು|
ಸರಿ ದಾರಿಯದೋರಲು ಸಾವಿರ ಹೂವ ತನ್ನಿ||೧೦||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ