ನಲವತ್ತೆರಡು
ಸರಳವಾದ ವೃತವ ಮಾಡಿರೊ ಧಾರುಣಿಯೊಳು||ಪ||
ಹರಿಪಾದ ಸ್ಮರಣೆಯೆಂಬ|
ಪರಮಪದವಿ ನೀಡಬಲ್ಲ ||ಅ.ಪ||
ಉಪವಾಸ ಬೇಕಿಲ್ಲ |
ತಪಯಾಗದಳುಕಿಲ್ಲ|
ಚಪಲಮತಿಗಳು ಕೂಡ |
ಉಪಾಯದಿ ಕೈಗೊಂಬ||ಸರಳ||
ಮಡಿಯನುಡಬೇಕಿಲ್ಲ|
ತಡೆದು ಹಸಿಯಬೇಕಿಲ್ಲ|
ಆಡುತಾಡುತಲೊಮ್ಮೆ|
ಪಾಡಿದರೆ ಸಾಕೆಂಬ||ಸರಳ||
ಹಣ ಕೂಡಬೇಕಿಲ್ಲ|
ಗುಣಪಡೆಯ ಬೇಕಿಲ್ಲ|
ಮಣಮಣವೆಂದು ನಿತ್ಯ|
ಮನದೊಳಗೆ ನೆನೆವಂಥ||ಸರಳ||
ಕರವಮುಗಿಯಲುಯಿಲ್ಲ|
ಚರಣಕೆರಗಲುಯಿಲ್ಲ|
ಗುರುಗುರುಗುಟ್ಟುತೊಮ್ಮೆ|
ಪರಿಯಿಂದ ನುಡಿವಂಥ||ಸರಳ||
ಹಿತವ ಕಂಡು ಸಲಹುವ|
ಉತ್ತಮ ಗುಣ ವಿಶೇಷ
ಮಾತರೀಶ ವಿಠಲನ|
ಅತಿಯಾಗಿ ನೆನೆವಂಥ||ಸರಳ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ