ಇಪ್ಪತೈದು
ಇಂದಿನ ದಿನ ಬರಲೆಂದು ನಾ
ನೆಂದಿನಿಂದ ಕಾಯುತಲಿದ್ದೆ
ಇಂದಿರಾರಮಣನ ಒಲುಮೆಯು
ಇಂದೆನಗಾಯಿತು ಶ್ರೀ ಹರಿಯೆ||ಇಂದಿನ||
ಎಳೆ ನಾರಿಕೇಳದಭಿಷೇಕ
ಹಾಲು ಗಂಧ ಚಂದನ ಸುರಿಸಿ
ಚೆಲುವ ಮೂಲ ಬಿಂಬವ ಕಂಡು
ಎಳೆ ತುಳಸಿಯ ದಳವನ್ನಿಡಲು||ಇಂದಿನ||
ಬಣ್ಣಬಣ್ಣದಂಚಿನೊಳೆಸೆವ
ನುಣ್ಣನೆಯ ವಸನವನು ತೊಡಿಸಿ
ಎಣ್ಣೆ ಬತ್ತಿಯನಿಟ್ಟು ದೀಪ
ಕಣ್ಣ ತುಂಬಿಹ ಮೂರುತಿಯೇ||ಇಂದಿನ||
ಮಾಲೆ ತುಳಸಿ ಹೂವಿನ ಹಾರ
ಎಲೆ ಕ್ರಮುಕ ಹರಿವಾಣದೊಳು
ಸಾಲುದಂಡೆ ಹಾಲು ಪಾಯಸ
ಎಲೆಯೊಳಂದದಲಿ ಬಡಿಸಿಡಲು||ಇಂದಿನ||
ಹೆಂಗಳೆಯರೆಲ್ಲ ಸೇರಿ ಪಾಡಿ
ರಂಗ ಮಾತರೀಶ ವಿಠಲಗೆ
ಮಂಗಳಾರತಿ ಬಿಡದೆ ಮಾಡಿ
ಕಂಗಳಿಗಾನಂದ ನೋಡಲು||ಇಂದಿನ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ