ಹತ್ತು

 

ನಿನ್ನ ಒಡನಾಟ ಸಿಗುವುದಾದರೆ|

ಇನ್ನೊಂದು ಜನ್ಮ ವೆನಗಿರಲಿ ||ಪ||

ಪನ್ನಗಶಯನ ಸಿರಿ ಮಾತರೀಶ|

ಎನ್ನೊಡೆಯ ನೀನಯ್ಯ ಹರಿಯೆ||ಅ.ಪ||


ಕಲ್ಲಾಗಿ ಪುಟ್ಟಿದರೆ‌ |

ಒಳ್ಳೆ ಮೂರುತಿ ಮಾಡು|

ಧೂಳಾಗಿ ಪುಟ್ಟಿದರೆ|

ಹೊಳೆವ ಪಾದವ ನೀಡು|

ಮೊಳೆಯಾಗಿ ಪುಟ್ಟಿದರೆ|

ಕೀಲಾಗಿ ಗುಡಿಯೊಳಗೆ ಇರಿಸಯ್ಯ|

ಪುಲ್ಲಲೋಚನ ಘನ್ನ ಮಹಿಮನೇ ||ನಿನ್ನ||


ಅಳುವಾಗಿಸಲು ಎನ್ನ|

ಗೋಳಿಡುವೆ ನಿನಗಾಗಿ|

ಗಾಳಿಯಾಗಿ ಬಳಿಯೊಳ್|

ಸುಳಿದಾಡುತಲಿರುವೆ|

ತಾಳೆಗರಿಯೊಳಗೆನ್ನ|

ಎಳೆಯ ಅಕ್ಷರಗೊಳಿಸಿ ಬರೆಸಯ್ಯ|

ಬಾಲನಿಗೊಲಿದ ಘನ್ನ ನರಸಿಂಹ ||ನಿನ್ನ||


ಬಾಳೆ ನಾರಾಗಿಸಲು|

ಮಾಲೆಯಾಗುವೆ ನಿನ್ನ|

ಹಳೆಯ ಬೂದಿಯಾಗಿಸೆ|

ತೊಳೆವೆ ಪಂಚಪಾತ್ರೆಯ|

ಎಳೆನೀರಾದೆ ಅಭಿಷೇಕಕಯ್ಯ|

ಏಳು ಮಲೆಗಳೊಡೆಯ ವೆಂಕಟೇಶ ||ನಿನ್ನ||


ಏನಾದರೂ ನಿಮ್ಮ|

ಗಾನ ಮಾಳ್ಪರ ಸಂಗ|

ಅನುಗಾಲ ನೀಡುವುದು|

ಮಾನದಿಂ ಕಾಯುವುದು|

ನಿನ್ನ ಮೇಲಣ ಆಣೆಯಿಹುದೆನ್ನ|

ಘನ್ನ ಮಹಿಮ ಮಾತರೀಶ ವಿಠಲ||ನಿನ್ನ||










ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು