ಹನ್ನೊಂದು
ಎಲ್ಲವ ಬಿಟ್ಟು ರಾಯನ ಪದವಿ ಪಡೆದ ಕಾಣೆ|
ಕಲ್ಲನು ಮೆಟ್ಟಿ ಮುಕ್ತಿಯ ಕೊಟ್ಟ ರಾಮನಾಣೆ||ಪ||
ಬಲ್ಲಿದರೊಳಗೆ ಬಲ್ಲಿದನಾತ|
ಎಲ್ಲರ ಕಷ್ಟ ಕಳೆಯುವನಾತ|
ಮುಳ್ಳಿನ ಹಾದಿ ತುಳಿದರನೆತ್ತಿ|
ಹುಲ್ಲಿನ ಹಾಸ ಕೊಡುವ ಗುರುರಾಯ ತಾನೆ||ಎಲ್ಲವ||
ತುಂಗೆಯ ತಟದಿ ನಿಂತಿರುವಾತ|
ಭಂಗವ ಕಳೆದು ಪೊರೆಯುವನೀತ|
ಅಂಗಕೆ ಕಾವಿ ಧರಿಸಿರುವಾತ|
ರಂಗನ ಪಾದ ತೋರ್ವ ಯತಿರಾಯ ತಾನೆ||ಎಲ್ಲವ||
ಗೋಪಿಯ ಬೊಟ್ಟನಿಟ್ಟಿರುವಾತ|
ಪಾಪದ ಬೆಟ್ಟ ಮೆಟ್ಟಿದನೀತ|
ಕೋಪವ ಕುಟ್ಟಿ ಅಟ್ಟುವನಾತ|
ಈಪರಿಯಿಂದ ಪೊರೆವ ಭವಬಂಧು ತಾನೆ||ಎಲ್ಲವ||
ಅತೀತ ಕರ್ಮ ಮಾಡಿದವರಿಗೆ|
ಮತಿಯನ್ನಿತ್ತು ಶಾಶ್ವತ ವಾದ|
ಗತಿಯಂಗೊಡುವೆ ಎನ್ನುತಲಿರ್ದ|
ಮಾತರೀಶ ವಿಠಲನ ನಿಜದಾಸ ತಾನೆ||ಎಲ್ಲವ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ