ಮೂರು
ಇಂದಿನ ಬೆಳಗ ತೋರಿದುದಕೆ
ವಂದಿಸುವೆನೊಳಗೊಳಗೆ||ಪ||
ಮುಂದೆ ದಾರಿ ತೋರುವಾತ
ಇಂದಿರಾ ರಮಣನಯ್ಯ.||ಅ.ಪ||
ನಾಳೆಗೆಂದು ಬೆಳೆದುದು
ಗಾಳಿ ಮಳೆಗಾಯಿತಯ್ಯ
ಅಳಿದುಳಿದುದೆಲ್ಲ ತಾ
ಹೊಳೆಗೆ ಕೊಚ್ಚಿ ಹೋಯಿತು||ಇಂದಿನ||
ಕೂಡಿಟ್ಟ ಧನಕನಕ
ಒಡವೆ ವಸ್ತ್ರಗಳೆಲ್ಲ
ಕಡೆಗೆ ಕಳವಾಗಿ ನಾ
ಬಡವಾಗಿ ಹೋದೆನೈ||ಇಂದಿನ||
ಸದಾ ರತಿಸುಖದೊಳಗೆ
ಒದಗುತಲಿ ನಾನತೀ
ವಿಧವಿಧದ ಪಾಪಗಳ
ಸುದೆಯೊಳಗೆ ಮಾಡಿದೆನೊ||ಇಂದಿನ||
ನಾಳೆಯಿದೆಯೆಂದು ಸರಿ
ವೇಳೆ ತಿಳಿಯದೆ ಇಂದು
ಗೋಳಿಡಲು ಯಮಬರದೆ
ನಾಳೆಯೆಂಬನು ತಿಳಿಯೊ||ಇಂದಿನ||
ಪ್ರತಿದಿನವನಿತ್ತಾತ
ಮಾತರೀಶ ವಿಠಲ
ಮತಿಯಿತ್ತೆನಗೆ ಜಗದಿ
ಉತ್ತಮನೆನಿಸು ತಂದೆ||ಇಂದಿನ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ