ಹದಿನಾರು
ಒಂದನೊಂದು ಕಾಲದಲ್ಲಿ|
ಇಂಧುಧರನ ಸೇವೆ ಮಾಡಿ|
ಅಂದದಲ್ಲಿ ಇರ್ದನೊಬ್ಬ ವಿಪ್ರ ಕಾಣಿರೊ||
ಹುಲ್ಲು ಮನೆಯ ಮಾಡಿನೊಳಗೆ|
ಕಲ್ಲು ದಿಂಬು ನೆಲದ ಹಾಸು|
ಮೆಲಲಿಕಿಲ್ಲ ಒಂದು ಬೊಗಸೆ ಬಡವ ಕಾಣಿರೊ||
ರಾಗಿಅಕ್ಕಿ ದವಸವಿರದೆ|
ಬಾಗಿಕೂಗಿ ಅಳುತರಿಹರು|
ಸಾಗಿ ಪೋಗಿ ಭವದಿ ದುರಿತ ಅಧಿಕವಾಹುದು||
ಮಾಗಿ ಹೋದ ಕೇಶರಾಶಿ|
ಬಾಗಿ ಹೋದ ಬೆನ್ನು ಮೂಳೆ|
ಭೋಗಿಭೂಷಿ ಹರನ ನೆನೆವ ವಿಪ್ರೋತ್ತಮ||
ಬಡವನಾಗಿ ಇರಲು ಕೂಡ|
ಎಡೆಯಬಿಡದೆ ಶಿವನ ಪೂಜೆ|
ಮಡದಿಮಕ್ಕಳೊಡನೆ ಸೇರಿ ಮಾಡುತಿರ್ದನು||
ಬಡವು ಇರದೆ ಒಡಲು ಕರಗಿ|
ನಡುವು ಬಾಗಿ ಇರಲು ಕೂಡ|
ಒಡೆಯ ಶಿವನ ಪೂಜೆ ಮಾಡ್ವ ಮಡದಿಯೊಂದಿಗೆ.||
ಇಕ್ಕೆಲದಿ ಮಕ್ಕಳೆರಡು|
ತಕ್ಕುದಾದ ಮಡದಿ ಜೊತೆಗೆ|
ಮುಕ್ಕಣನಾ ಭಜನೆ ಸದಾ ಅಂತಃಕರಣದಿ||
ಅಶನವಿರದೆ ಅಳುತಲಿರುವ|
ಕೃಶಂಬಟ್ಟ ಮಕ್ಕಳನ್ನು|
ಈಶ ಪೊರೆಯಬೇಕೆಂದು ಮೊರೆಯನಿಡುವನು||
ಶಿವನ ರಾತ್ರಿಬರಲು ಅಂದು|
ಅವನ ಪೂಜೆ ಮಾಡಲಿಕ್ಕೆ|
ಭವನದೊಳಗೆಯೇನು ಇಲ್ಲ ಎಂದಳಂಗನೆ||
ಮಡದಿಯಂದ ನುಡಿಯ ಕೇಳಿ|
ಒಡನೆ ಬರುವೆ ಫಲವಗೊಂಡು|
ಕಾಡನರಸಿ ಫಲ ಪುಷ್ಪ ತರುವೆಯೆಂದನ||
ಕಾಡ ದಾರಿ ಪಿಡಿದುಕೊಂಡು|
ನಡೆಯುತಿರಲು ತುರದಿ ವಿಪ್ರ|
ಬೇಡರೂಪಿನವನು ಒಬ್ಬ ನೋಡುತಿರ್ದನು||
ಕಾಡ ನಡುವೆ ಗುಡಿಯ ಕಟ್ಟಿ|
ಜೋಡಿ ನಂದಿ ಗಾಡಿ ಏರಿ |
ಮೋಡಿ ಮಾಡಿ ಅವನ ನೋಡಿ ಕಾಡುತಿರುವನೆ||
ಕರದಿ ಕಪ್ಪ ಶೂಲ ಹಿಡಿದು|
ವರೆಸಿ ಭೂದಿ ಹಣೆಯ ಮೇಲೆ|
ಕರಿಯ ಉಡುಗೆ ಧರಿಸಿ ಸಾಗಿ ಬರುತಲಿರುವನು||
ಉರಿಯ ಗೆಂಡ ನೋಳ್ಪ ತೆರದ|
ಮೂರು ಕಣ್ಣು ಇಹುದು ಅವಗೆ|
ಕೊರಳ ಸುತ್ತ ಉರಗ ಮಾಲೆ ಇರಿಸಿಕೊಂಡಿಹ||
ಖಂಡ ತುಂಡ ಮೈಯದೋರಿ|
ದಂಡ ಶೂಲ ಪಿಡಿದು ನಡೆವ|
ಗಂಡುಗಲಿಯ ನಿಲುವು ಕಂಡು ಬೆರಗುಗೊಂಡನೆ||
ಹಿಂದೆ ಎಲ್ಲೊ ನೋಡಿದಂತೆ|
ಅಂದು ಅವಗೆ ಭಾಸವಾಗಿ|
ಮಂದಮತಿಯು ತಾನು ನಿಂದ ಅಂದದಿಂದಲಿ||
ವೀರ ಕೋಟಿ ತೇಜ ರವಿಯು|
ಭರದಿ ಹೊಳೆವ ತೆರದಿ ತಾನು|
ಧರಣಿ ಯಲ್ಲಿ ಹೊಳೆದು ತನ್ನ ನೆರಳಗಾಣದೆ.||
ಇಂತು ಇರುವ ರೂಪಿನವನು|
ಅಂತು ಬಂದು ಎದುರು ನಿಂತು|
ಸಂತರಂತೆ ನೋಡುತಿರುವ ದಂತದೋರುತ||
ಮುತ್ತಿ ನಂಥ ದಂತ ಪಂಕ್ತಿ|
ಇತ್ತು ಗಲ್ಲದೊಳಗೆ ಕುಳಿಯು|
ಗತ್ತಿನಿಂದ ಮುಗುಳನೀವ ಜ-ಗತ್ತಿನೊಡೆಯನು.||
ಜಡೆಯ ಕಟ್ಟಿ ನೀರ ಬಸಿದು|
ಕಡೆಯ ದಿಕ್ಕಿನೊಡೆಯ ಶಿವನು|
ಒಡನೆ ಕಂಡು ಪಾಮರವನ ನೋಡುತಿದ್ದನು.||
ಕರವು ಬಾಯಿ ಕಟ್ಟಿ ಹೋಗಿ|
ಮರಕೆ ಆನು ಕೊಟ್ಟು ಒರಗಿ|
ಪರಿಯ ಕಂಡು ಕರವ ಮುಗಿಯುತಿರ್ದನೆ||
ಗಾಡಿಯಿಂದ ಕೆಳಗೆ ಇಳಿದು|
ಓಡಿ ಬಂದು ನೋಡಿ ನಿಂತು|
ತೀಡಿ ತಲೆಯ ನೇವರಿಸಿದ ಗಾಡಿಕಾರನು||
ಉಭಯ ಕುಶಲ ಮಾತನಾಡಿ|
ಅಭಯ ಹಸ್ತ ತಲೆಯೊಳಿಟ್ಟು|
ರಭಸದಿಂದ ಬಂದ ವಿಷಯ ಕೇಳುತಿರುವನು||
ಅಯ್ಯ ಇಂದು ಶಿವನರಾತ್ರಿ|
ಪಯಣ ಮಾಡಿ ವನಕೆ ಬಂದೆ|
ಜೀಯ ಶಿವನ ಪೂಜೆಗಾಗಿ ಹೂವ ಕೊಯ್ಯಲು||
ಒಡನೆ ನಿನ್ನ ಯಾರು ಇಲ್ಲ|
ಕುಡಿಗೆ ಕಡೆಗೆ ದೇವ ಬಲ್ಲ |
ಬಡಿಗೆ ಹಿಡಿದು ನಡೆವ ಗೊಡವೆ ನಿನ್ನದಲ್ಲವೆ||
ತನಗೆ ದೇವ ಶಿವನ ದಯದಿ |
ಮನದ ಒಡತಿ ಜೊತೆಯೊಳಿಹಳು|
ಮನೆಗೆ ಮಕ್ಕಳೆರಡು ಇಹರು ಚಂದದಲ್ಲಿಯೆ||
ಮಡದಿ ಮಕ್ಕಳೆಲ್ಲ ಅಲ್ಲಿ|
ಬಿಡದೆಯೆ ನಿತ್ಯೋಪವಾಸ|
ಮಾಡುತಿಹರು ಶಿವನ ನೆನೆದು ಮನಸಿನಲ್ಲಿಯೆ||
ಹೂವ ಕೊಯ್ಯಲೇಕೆ ನೀನು|
ಬವಣೆ ಪಟ್ಟು ವನಕೆ ಬಂದೆ|
ಅವನಿಯೊಳಗೆ ಕುಸುಮಕೆಲ್ಲ ರೋಗಬಂದಿತೆ?
ನಮ್ಮ ಪಾಡು ನಮಗೆ ಗೊತ್ತು|
ತಮ್ಮ ನುಡಿಯೊಳೇಕೆ ಕುಹಕ|
ಸುಮ್ಮನಿರಲು ನಾನು ಅತಿ ಕು-ಚೋದ್ಯವಾಯಿತೆ?|
ಹೋಕ ತಪ್ಪು ತಿಳಿಯ ಬೇಡ|
ತೂಕಕಿರದ ನುಡಿಯು ಬೇಡ|
ಬಾಕಿಗೆಲಸ ಹಲವು ಇಹುದು ದಾರಿ ಬಿಡಲೆನೆ||
ತಾಪ ಕೋಪ ಮಾಡಬೇಡಿ|
ಕಪಟ ಮಾಡ್ವ ಬಯಕೆಯಿಲ್ಲ|
ಪಾಪ ಕಂಡು ಕರುಣೆದೋರಿ ಕೇಳ್ದುದೆಂದೆನೆ||
ಉಡಲು ಎರಡು ಬಟ್ಟೆಯಿಲ್ಲ|
ಒಡಲು ತುಂಬ ಊಟವಿಲ್ಲ|
ಕಾಡ ಅರಸಿ ಬಂದರಷ್ಟೆ ದಿನವು ಪೋಪುದು||
ನಿತ್ಯ ಭಜನೆ ಮಾಡಲೇಕೆ|
ಹತ್ತು ಭವಣೆ ತಪ್ಪಲಿಲ್ಲ|
ಮತ್ತೆ ಹರನ ಚರಣ ಸೇವೆ ಮಾಡುವೇತಕೆ?
ಕಾಯ ಶುದ್ದಿಗಾಗಿ ಸ್ನಾನ|
ಮಾಯ ಕಳೆಯೆ ಶಿವನ ಧ್ಯಾನ|
ದಯದಿ ದೊರಕಿಹುದೈ ಎನಗೆ ಜೀವಸಾಧನ||
ಶಿವನ ಬಗೆಗೆ ನುಡಿಯ ಬೇಡ|
ನೆವನ ಪಿಡಿದು ಜರೆಯ ಬೇಡ|
ಅವನ ತೆರನೊಳಿರುವರಾರ ನೋಡಲಾರೆಯೆ||
ಎನ್ನ ಕರ್ಮ ಅಧಿಕ ವಿರಲು|
ಮುನ್ನ ಕವಿದ ಮೋಡದಂತೆ|
ಪನ್ನಗಧರನ ನಾನೆಂತು ದೂಷಿಪುದಯ್ಯ||
ನಾಮ ಬಲದಿ ಇಂದು ಅವನ|
ಯಾಮ ಗಳಿಗೆ ಸಾಗಿ ಪೋಗಿ|
ಕಾಮವೆಲ್ಲ ಸಲುತಲಿಹುದು ಸಮಯದಲ್ಲಿಯೆ||
ಮರೆಯಲಿಕ್ಕೆ ನೀನು ಹರನ|
ಸಿರಿಯ ಬೊಗಸೆದುಂಬ ಕೊಡುವೆ|
ಅರಸಿಯೊಡನೆ ಬಾಳಲುಂಟು ಸರಸದಿಂದಲಿ||
ಹರನ ರೂಪ ಧರಿಸಿ ಇಲ್ಲಿ|
ಮರುಳು ಮಾಡ್ವ ಕಾರ್ಯ ತೊರೆಯೆ|
ಕರುಣೆಯಿಹುದು ನಿನ್ನ ಮೇಲೆ ಪೋಗುಪೋಗೆಲೆ||
ಬಯಲ ಡಂಭದೋರ ಬೇಡ|
ಕಾಯ ರೂಪ ನಿಜವು ಅಲ್ಲ|
ಮಾಯ ರೂಪ ಹಾಕಿದೊಡನೆ ಶಿವನಾಗೆಯೋ||
ಮಸಣ ಕಾದು ಭಿಕ್ಷೆ ಬೇಡ್ವ|
ಅಸುವ ಹರಣಗೊಂಬ ಕಾರ್ಯ|
ಅಸಿತ ನಾತವಿರುವ ಉಡುಗೆ ಗಜದಜರ್ಮವು||
ಕಸದ ಮೇಲೆ ಕುಳಿತುಕೊಂಡು|
ಮಸಿಯ ಮೈಗೆ ಬಳಿದುಕೊಂಡು|
ನಸುಕಿನಲ್ಲಿ ಹೊರಟುಬಿಡುವ ಮಸಣಕೊಡೆಯನು||
ನಂಬಿನೆಚ್ಚಿ ಇರಲುಬಹುದು|
ಇಂಬುಕೊಡುವ ಕಾಮಧೇನು|
ಅಂಬಿಕಾ ಪತಿಯು ಶಿವನು ಕಂಬುಕಂದರ.||
ಹತ್ತು ಮಾತು ಬೇಡವಿಲ್ಲಿ|
ಚಿತ್ತದಲ್ಲಿ ಬುದ್ಧಿ ಕೊಡುವ|
ಕತೃ ಶಿವನು ಬೇರೆ ದೈವವಿಲ್ಲವೆಂದೆನೆ||
ಅನ್ಯ ಮಾತು ಹೇಳತೀರ|
ಬೆನ್ನದೋರಿ ಪೋಗು ಇನ್ನು|
ಎನ್ನ ದೈವ ಎನಗೆ ಮೇಲು ಪೋಗುಪೋಗೆನೆ||
ಎನ್ನಲಾತ ಅವುಡುಗಚ್ಚಿ|
ಮುನ್ನ ಬೇಡ ರೂಪಿನವನು|
ನಿನ್ನ ಭಕ್ತಿಗೆನ್ನ ನಮನ ಎಲೋ ಹಾರುವ||
ಬೇಡ ತನ್ನ ಚೀಲದಿಂದ|
ಅಡಗಿಸಿಟ್ಟ ಮುಷ್ಟಿ ಅಕ್ಕಿ|
ಒಡನೆ ತೆಗೆದು ಕರದಿ ಕೊಟ್ಟ ತಾನುಕೂಡಲೆ||
ಒಲ್ಲೆ ಇಲ್ಲ ಎನ್ನ ಬೇಡ|
ಕಲ್ಲ ಲಿಂಗ ಪೂಜೆಗೆಂದು|
ಸಲ್ಲಿಸುವುದು ಇದನು ನಾನು ಎಲೋ ಹಾರುವ||
ಶಾಕ-ಪಾಕ ಮಾಡಿ ಇದನು|
ಇಕ್ಕಿ ಶಿವಗೆ ಉಣಲು ಎಂದು|
ಕಕ್ಕೆಯಿಂದ ಬೇಡ ನುಡಿದ ಬೆಡಗಿನಿಂದಲಿ||
ಇಷ್ಟು ವರೆಗೆ ದೂರುತಿದ್ದು|
ಕಷ್ಟವಿಷ್ಟು ಬಿಡುವೆ ಯಾಕೆ|
ಮುಷ್ಟಿ ಅಕ್ಕಿ ಕೊಟ್ಟು ಈಗ ಹೇಳಬೇಕೆಲೆ||
ರೇಗಬೇಕು ನಿನ್ನನೆಂದು|
ರಾಗವೆಳೆದು ನುಡಿದುದಯ್ಯ|
ಬೇಗಪೋಗಿ ಗೈಯಬೇಕು ಪೂಜೆಯೆಂದೆನೆ||
ಅಸಮ ದೈವ ಹರನ ಪೂಜೆ|
ಭಸ್ಮ ಗಂಧ ಕಾಯಿ ಹಣ್ಣು|
ಎಸಳು ಬಿಲ್ವ ತಂದುಗೊಡುವೆ ನಾಳೆಯಿಲ್ಲಿಗೆ||
ನಾನುಯಿತ್ತ ಅಕ್ಕಿಯಲ್ಲಿ|
ಒನ್ದು ಅಗಳು ಉಳಿಸಿ ಮಾತ್ರ|
ಎನ್ನ ಕಾಣಬೇಕು ನಾಳೆ ನಿನುಂಮಿಲ್ಲಿಯೆ|
ಸರಿಯೆ ಎನುತ ಬಂದ ಕಾರ್ಯ|
ಪರಿಯು ಮುಗಿದು ಮುನ್ನ ಪೋಗಿ|
ಹರನ ಪೂಜೆ ಮಾಡಲುಂಟು ಪೋಗಿಬರುವೆನೆ||
ಶಿವನ ಕರುಣೆಯಿಂದ ಒಬ್ಬ|
ಧವಸ ಅಕ್ಕಿ ಯನ್ನು ಕೊಟ್ಟ|
ದಿವಸ ಭಾಗ್ಯ ರೂಪಿನಿಂದ ಬಂದಿತಿಂದೆನೆ||
ಅನ್ನವನ್ನು ನೋಡದೆಷ್ಟು|
ನಿನ್ನೆ ಮೊನ್ನೆಯಾಯಿತೆಂದು|
ನಯನದೊಳಗೆ ಜಲವದುಂಬಿ ಮಡದಿಯೆಂದಳು||
ಶಾಕಪಾಕವನ್ನು ಮಾಡಿ|
ಸಾಕುಟುಂಬ ಸೇರಿ ವಿಪ್ರ|
ಶಕಟಾರಿ ಪಿತವೈರಿ ಪೂಜೆಮಾಡಿದ||
ಮಣೆಯನಿಟ್ಟು ಮಡದಿಯಾಕೆ|
ಉಣಲುಬನ್ನಿ ಕಾಂತನೆಂದು|
ಚಿಣ್ಣರನ್ನು ಕೂಡಿಕೊಂಡು ಬಡಿಸುತಿರ್ದಳು||
ಮದನಮುಖಿಯೆ ಒಂದುಅಗುಳು|
ವ್ಯಾಧಗೆಂದು ಉಳಿಸಬೇಕು|
ಉದಯದೊಳಗೆ ಪೋಗಿ ಅವಗೆ ಈಯಬೇಕೆನೆ||
ವದನದೊಳಗೆ ಮುಗುಳುನಗುತ|
ಮೋದದಿಂದ ಉಣ್ಣಲಿಕ್ಕಿ|
ಉದರಪೂರ್ತಿ ಬಡಿಸಿದಳಾ ವಿಪ್ರನಾಂಗನೆ||
ಉಂಡಮೇಲೂ ನಾಕುಮಂದಿ|
ಹಂಡೆಪೂರ್ತಿ ಇಹುದುಅನ್ನ|
ಮಂಡೆಬಿಸಿಯ ಮಾಡಿಕೊಂಡ ವಿಪ್ರೋತ್ತಮ||
ಅಕ್ಕಪಕ್ಕ ವಾರ್ತೆ ಕರೆದು|
ಇಕ್ಕಿ ಬಡವು ಎಲ್ಲರಿಗೂ|
ಉಕ್ಕಿ ಅನ್ನ ಏರುತಿತ್ತು ಆಕೂಡಲೇ||
ಊರಜನರಿಗೆಲ್ಲ ವಿಪ್ರ|
ಒರೆದು ಉಂಡು ಪೋಗಿರೆಂದ|
ಭರದಿ ಜನರು ನೆರೆದರಲ್ಲಿ ಕರೆದಗೂಡಲೆ||
ಸಪರಿವಾರ ಸೇರಿ ಬಡಿಸಿ|
ಸಫಲನಾಗದಲೇ ಪೋದ|
ತಪಲೆಯೊಳೊಂದಗುಳ ತಾನುಳಿಸಲಾರದೆ||
ಕಾಯವಿದ್ದರೇನು ಫಲಾ|
ಬಾಯಿಮಾತು ತಪ್ಪಿತಲ್ಲ|
ಭಯದಿ ಒದರಿಕೊಂಡ ವಿಪ್ರ ಆದಾಗಲೇ||
ಮೋಡಿಗಾರ ಬೇಡನಲ್ಲ|
ಮಾಡಿ ಮಾಯ ಮಾಟವನ್ನು|
ಓಡಿಪೋಗಿ ಕೇಳಿಬರುವೆ ವನದವಾಸಿಯ||
ಸಾವಿರಾರು ಮಂದಿಯುಂಡು|
ಅವನಿಯೊಳಗೆ ಇಂಥ ಊಟ|
ಈವರೆಗೂ ಮಾಡಲಿಲ್ಲ ಎನುತಲಿದ್ದರು||
ಹರನಸಾಸ ಪಟ್ಟರೂನು|
ಉರುಕುತಿತ್ತು ತಪಲೆಯೊಳಗೆ|
ಬರಿದು ಆಗಲಿಲ್ಲ ಮಹಾನ್ನಪ್ರಸಾದವು||
ಚಿಂತಕ್ರಾಂತನಾಗಿ ವಿಪ್ರ|
ಅಂತು ಮಾತುತಪ್ಪಿತೆಂದು|
ಭ್ರಾಂತುಗೊಂಡು ಪರಿಯತಾಪ ಪಟ್ಟುಕೊಂಡನು||
ಇಂದು ನಮಗೆ ಬಂದ ಭಾಗ್ಯ |
ಎಂದುಕೊಂಡು ವಿಪ್ರಸತಿಯು|
ತೊಂದರೆಯು ನೀಗಿತೆಂದು ಅತಿ ಮೋದಗೊಂಡಳು||
ಅಂದು ಅಕ್ಕಿಕೊಟ್ಟವಾತ|
ಸಂದೆಗವಿನಿತು ಬೇಡವೈ|
ನಂದಿಏರಿಬಂದವನು ಸಿರಿ ಹರನಾಗಿಹ||
ಆದರಿಂದ ತಾವು ಬಂದು|
ಮದನವೈರಿ ಹರನ ನೆನೆದು|
ಮುದ್ದೆಯನ್ನ ಕಟ್ಟಿಕೊಂಡು ಹೊರಡುವೆಂದಳು||
ಮಡದಿ ನುಡಿಯ ಕೇಳಿ ವಿಪ್ರ|
ಕೂಡಿ ಕೊಂಡು ಮಡದಿಯನ್ನು|
ಕೂಡಲೆಯೇ ಹೊರಟುಬಿಟ್ಟ ಕಾಡಿನಂಚಿಗೆ||
ಬೇಡನಿದ್ದ ಜಾಗದಲ್ಲಿ|
ಗುಡಿಯಕಂಡು ಬೆರಗುಗೊಂಡು|
ಒಡೆಯ ಹರನ ಲಿಂಗವಲ್ಲಿ ಮೂಡಿಕೊಂಡಿತು||
ಕಡೆಯದಿಕ್ಕಿನೊಡೆಯ ಹರನು|
ಬೇಡರೂಪಿನಿಂದ ಬಂದು|
ಕಾಡಿನೊಳಗೆ ತನ್ನ ಗುಡಿಯ ಮಾಡಿಕೊಂಡನು||
ಮಾತನುಳಿಸು ಮಹಾದೇವ|
ನುತಿಸಿ ಗಂಟು ಬಿಚ್ಚಿ ನೋಡೆ|
ಮಾತಿನಂತೆ ಅಗುಳು ಅನ್ನ ಮಾತ್ರವಿದ್ದಿತು.||
ನನ್ನದೇನು ಇಲ್ಲವಿಲ್ಲಿ|
ಮುನ್ನ ನೀನು ಕೊಟ್ಟ ಕಾಯ|
ಎನ್ನ ಮಾತನುಳಿಸಿಬಿಟ್ಟೆ ಕರುಣಮೂರುತಿ.||
ಹರನ ದಯದಿ ಮರಳಿ ಮನೆಗೆ|
ಕರವ ಮುಗಿದು ಹರನ ಪದಕೆ|
ನೂರು ವರ್ಷ ಬಾಳಿದನಾ ಹರುಷದಿಂದಲಿ||
ಸೋಮವಾರ ಪಠಣ ಮಾಡೆ|
ಕಾಮವೈರಿ ಸತತ ಪೊರೆವ|
ಅಮಿತ ಕಾಮಸಲಿಸಿ ಸುಸಂತಾನ ನೀಡುವ||
ಬರೆದು ಓದಿ ಕೇಳಿದರಿಗೆ|
ಹರನ ಪದವಿ ಲಭ್ಯ ವಹುದು|
ಕರೆದು ಮುಕ್ತಿ ಕೊಡುವ ಮಾತರೀಶ ವಿಠಲನು.||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ