ಇಪ್ಪತ್ತಾರು

 

ಮಾಧವ ಮಧುಸೂದನ ನಿನಗೆ

ಹದಿನಾರುಪಚಾರದ ಪೂಜೆ||ಪ||

ಉದಯದೊಳು ಮಾಡುವೆನನುದಿನ

ಸುದಿನವ ಮಾಡಯ್ಯ ಪದುಮನಾಭ||ಅ.ಪ||


ಅನವರತನಡಿಗೆರಗಿ ತವಕದಿ|

ಅನುದಿನವು ಪಾಡಿ ಪೊಗಳಿ ಸದಾ|

ತನುವ ದಂಡಿಸಿ ಮೌನದಿಂದಲಿ|

ಧ್ಯಾನದಿಂದ ಪೂಜಿಸುವೆ ಹರಿಯೆ||ಮಾಧವ||


ಸಾವಕಾಶದಿಂದಲೀ ಬಂದು|

ಭವಭಯಹಾರಿಯನೇ ಕಂಡು|

ದೇವರದೇವಾ ರಕ್ಷಿಸೆಂದು|

ಆವಾಹಿಸಿ ಪೂಜಿಸುವೆ ಹರಿಯೆ||ಮಾಧವ||


ವಸುದೇವಸುತನ ಪರಿಯಿಂದಲಿ|

ವಸುಧೆಯೊಳು ಭಕ್ತಿಯಿಂದ ನೆನೆದು|

ಅಸಮಾನ ದೈವ ಹರಿಗೆ ಎಸೆವ|

ಆಸನವನ್ನಿತ್ತು ಪೂಜಿಸುವೆ||ಮಾಧವ||


ಸಾದರದಿಂದಲಿ ಹರಿಯ ಭಜಿಸಿ|

ನಾದಲೋಲನ ಬಲು ಕೊಂಡಾಡಿ|

ವೇದಘೋಷದಿ ಜಲವ ಸುರಿಯುತ|

ಪಾದದ್ವಯ ತೊಳೆದು ಪೂಜಿಸುವೆ||ಮಾಧವ||


ಪುಸ್ತಕದಲಿರುವ ನಿನ್ನ ಭಜನೆ|

ಮಸ್ತಕದಲಿಟ್ಟು ನಿತ್ಯ ಭಜಿಸಿ|

ಉತ್ಸಾಹದಿಂದ ನಾನು ನಿನಗೆ|

ಹಸ್ತ ಉದಕ ಕೊಟ್ಟು ಪೂಜಿಸುವೆ||ಮಾಧವ||


ಆಚಾರವಿತ್ತು ಸಲಹಬೇಕು|

ವಿಚಾರವನಿತ್ತು ಎನ್ನ ಮನಕೆ|

ಅಚಲವಾಗಿ ವಚನವಿರಲಿ ನಿಜ|

ಆಚಮನದುಪಚಾರ ಮಾಡುವೆ||ಮಾಧವ||


ಅನ್ನಬ್ರಹ್ಮ ಉಡುಪಿ ಕೃಷ್ಣ|

ಎನ್ನನೀಗ ಪಾಲಿಸುವುದು ಸಲೆ|

ಬೆನ್ನ ಪಿಡಿದು ಕಾಯ್ವ ದೇವನಿಗೆ|

ಸ್ನಾನದ ಉಪಚಾರ ಮಾಡುವೆನು||ಮಾಧವ||


ಲವಣಶರಧಿಗೆ ಸೇತುವೆ ಮಾಡಿ|

ರಾವಣಾದಿ ರಕ್ಕಸರ ಕೊಂದು|

ಭವತಾಪ ನೀಗುವ ರಾಮನಿಗೆ|

ಜನಿವಾರದುಪಚಾರ ನೀಡುವೆ||ಮಾಧವ||


ಕಂದ ಪ್ರಹ್ಲಾದನ ನುಡಿ ಕೇಳಿ|

ಬಂದೆಯೊ ನರಹರಿಯ ರೂಪದಲಿ|

ತಂದೆಯಗೊಂದು ಒಲಿದವಗೆ ಸಿರಿ|

ಗಂಧದುಪಚಾರವ ಮಾಡುವೆನು||ಮಾಧವ||


ನಾರಾಯಣ ನಾಮ ಪಾಡುವರ|

ಸೆರೆ ಬಿಡಿಸಿ ವರವ ಕೊಡುವೆನೆನುತ|

ಬಾರಿಬಾರಿಗೆ ನುಡಿಯುವ ಹರಿಗೆ|

ಪರಿಪರಿಯರ್ಚನೆಯ ಮಾಡುವೆನು||ಮಾಧವ||


ಅಪರೂಪ ಗುಣಗಳ ದೇವನಿಗೆ|

ಸಪರಿವಾರ ಕೂಡಿ ಭಜಿಸುತಲಿ|

ಜಪತಪಗಳ ಮಾಡುತ ಅನುದಿನ|

ಧೂಪದುಪಚಾರದಿ ಪೂಜಿಪೆನು||ಮಾಧವ||


ವಿಪರೀತ ಮತಿಗಳಿಗಪವಾದ|

ಉಪಾಯದಿಂ ತಂದಿಟ್ಟು ಪೊರೆವ|

ಕೃಪಣವತ್ಸಲ ಕೃಪೆದೋರು|

ದೀಪವ ಹಚ್ಚಿಯುಪಚರಿಸುವೆನು||ಮಾಧವ||


ಭಾವಭಕ್ತಿಯಲಿ ನಿನ್ನ ನೆನೆದು|

ಭಾವಶುದ್ಧದಲಿ ಬಾಳ್ವೆನಯ್ಯ|

ಕಾವಕರುಣಿ ದೇವರದೇವಗೆ|

ನೈವೇದ್ಯದುಪಚಾರ ಮಾಡುವೆ||ಮಾಧವ||


ತಂದೆ ತಾಯಿ ಬಂಧು ಬಳಗೆಂದು|

ಇಂದಿರೇಶನ ನಾನು ನೆನೆಯುತ|

ಹಂಬಲದಿ ಪಾದಗಳಿಗೊಂದಿಸಿ|

ತಾಂಬೂಲದುಪಚಾರ ಮಾಡುವೆ||ಮಾಧವ||


ಸರಿ ಯಾರೋ ನಿನಗೀಭುವನದಿ|

ಬೇರೆ ದೈವಗಳಾರ ಕಾಣೆನೊ|

ವೀರ ಮಾತರೀಶವಿಠಲನಿಗೆ|

ನೀರಾಜನದಿ ಮಂಗಳವೆಂಬೆ||ಮಾಧವ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು