ಐವತ್ತೆಂಟು
ಹರಿಯ ತೋಟದಲ್ಲರಳಿದ ಹೂವುಗಳು|
ಕರುಣಾಮೃತವ ಬೀರುತಿವೆ ನೋಡಿ||ಪ||
ಶರಣುಬಂದವರ ಮರಳು ಮಾಡುತಿದೆ|
ಹರಿಪಾದಪದ್ಮ ಪರಿಮಳದ ಮೋಡಿ||ಅ.ಪ||
ಬಂಡೆಯೆಡೆಯೊಳಗೊಂದು|ದಂಡೆ ಕಡೆಯೊಳಗೊಂದು|
ಮೊಂಡೆಲೆ ಗಿಡದಿ ಬೆಳೆದ|ದುಂಡು ಮಲ್ಲಿಗೆ ಹೂವು|
ಕಂಡು ಕಾಣದ ಹೂವು|ಮಂಡೆಗಾಗದ ಹೂವು|
ಹಿಂಡುಹಿಂಡಲಿ ಬೆಳೆದ|ಗೆಂಡಸಂಪಿಗೆ ಹೂವು||ಹರಿಯ||
ಬಳುಕು ಲತೆಯೊಳು ಹೂವು|ತಳಿರಪತ್ರದ ಹೂವು|
ಬೆಳ್ಳಿ ಬಣ್ಣದ ಹೂವು| ಬಳ್ಳಿ ಜಾಜಿಯ ಹೂವು|
ಮುಳ್ಳು ಗಿಡದಲಿ ಹೂವು|ಕಳ್ಳ ಕದಿಯದ ಹೂವು|
ಬಾಳಿ ಬದುಕುವ ಹೂವು| ಒಳ್ಳೆ ತಾವರೆ ಹೂವು||ಹರಿಯ||
ಸತ್ವ ಪಡೆದಿಹ ಹೂವು|ಸತ್ಯ ಲೋಕದ ಹೂವು|
ನಿತ್ಯ ಮುಡಿಯುವ ಹೂವು|ಮತ್ತೆ ಮಸಣದ ಹೂವು|
ಸತ್ತು ಹೋಗಲು ಕೊರಳ| ಸುತ್ತು ಮಾಲೆಯ ಹೂವು|
ಮಾತರೀಶ ವಿಠಲನ|ಮುಕ್ತಿಧಾಮದ ಹೂವು||ಹರಿಯ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ