ಮೂವತ್ತ ಮೂರು
ಇಷ್ಟ ಪಟ್ಟು ನೆನೆದೆನೊ ನಾ-|
ನಷ್ಟಕುಲ ನಾಗರಾಜನ ||ಪ||
ಕಷ್ಟವ ಪರಿಹರಿಸಿ ಮನದ-|
ಭಿಷ್ಟ ಸಲ್ಲಿಸಿ ಸಲಹುವ ವಿ-|
ಶಿಷ್ಟ ಗುಣಗಳ ದೇವನಾ ||ಅನು.ಪ||ಇಷ್ಟ||
ಹುತ್ತದಲಿ ಹುದುಗಿ ಮಾಣಿಕ|
ಮುತ್ತ ಶಿರದೊಳಿಟ್ಟುಕೊಂಡು|
ಮತ್ತೆ ಅರಶಿನದ ಗಂಧವ|
ಮೆತ್ತಿಸಿಕೊಂಡು ಮೆರೆದವನ ||ಇಷ್ಟ||
ಕಿರಿಯ ವಟುಗಳ ಕರದಲ್ಲಿ|
ವರ ಪಂಚಮಿ ಪರ್ವ ದಿನದಿ|
ಹರಳು ಬೆಲ್ಲದ ಜೊತೆಗೆ ಹಸಿ|
ನೊರೆವಾಲ ಸುರಿಸಿಕೊಂಡನ ||ಇಷ್ಟ||
ಎಳೆ ನಾರಿಕೆಳದಭಿಷೇಕ|
ಬಲು ಸಂತೋಷದಲಿ ಪಡೆದು|
ಇಳೆಯ ಜನರ ಅಗವ ಕಳೆದು|
ಹೊಳೆವ ಶ್ರೀ ನಾಗರಾಜನ ||ಇಷ್ಟ||
ಸುತ್ತಿ ಕೊರಳ ಮಾಲೆಯಾಗಿ|
ಮತ್ತೆ ಹರಿಯ ಮಂಚವಾಗಿ|
ನಿತ್ಯ ಮಾತರೀಶನ ಅತಿ|
ಉತ್ತಮನಾಗಿ ಸೇವಿಪನ ||ಇಷ್ಟ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ