ಇಪ್ಪತ್ತೊಂಬತ್ತು
ಹಲವು ಮಾಯೆಯದೋರಿ|
ಎಲೆಯ ಮೇಲೆ ಮಲಗಿದ|
ಬಾಲಗೋಪಾಲ ಹರಿ|
ಎಲ್ಲರನು ಸಲಹುವನು||ಹಲವು||
ಗೊಲ್ಲರ ಮನೆ ಪೊಕ್ಕು|
ಕಳ್ಳತನವನು ಮಾಡಿ|
ಎಲ್ಲ ಬೆಣ್ಣೆಯ ಮೆದ್ದು|
ಮೆಲ್ಲನಡಗಿದ ಚೋರ||ಹಲವು||
ಕಿರಿದಾದ ಬೆರಳಿಂದ|
ಹಿರಿದು ಗಿರಿಯನು ಎತ್ತಿ|
ವರುಣನ ಧಾರೆಯಿಂದ|
ಧರೆಯನುಳಿಸಿದೆ ಹರಿಯೆ||ಹಲವು||
ಕಾಳಿಪಣಿ ತಲೆಮೆಟ್ಟಿ|
ಲೀಲೆಯಿಂ ನಲಿದಾಡಿ|
ಬಾಲವನೆ ಪಿಡಿದೆಳೆದು|
ಮೂಲೆಗೆಸೆದೆಯೊ ಹರಿಯೆ||ಹಲವು||
ಮೊಲೆಯನುಣಿಸಲು ಬಂದ|
ಖಳ ಪೂತನಿಯ ಕೊಂದು|
ಬಿಲ್ಲ ಹಬ್ಬದ ನೆವದಿ|
ಮಲ್ಲರ ತರಿದ ಹರಿಯೆ||ಹಲವು||
ಚಿತ್ತದೊಲ್ಲಭ ಹರಿಯ|
ನಿತ್ಯದಿಂದ ನೆನೆಯಲು|
ಉತ್ತಮತನದಿ ಪೊರೆವ|
ಮಾತರೀಶ ವಿಠ್ಠಲ||ಹಲವು||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ