ಪೋಸ್ಟ್‌ಗಳು

ಎಪ್ಪತ್ತ ಮೂರು

ಸುಖವಾಗಿಹೆನೆಂದರೆ ಏತರದ ಸುಖವೊ? ಬಕುಳಾ ತನಯ ನಿನ್ನನು ನೋಡದ ಸುಖವು|| ಸುಖವಲ್ಲವೆನಗೆ ಎನ್ನಯ್ಯ ತಿಮ್ಮಯ್ಯ|| ಸಾಕೆನಗೀ ಭವದೊಲವು ಪರಗತಿಯೆಂಬೊ|| ಸುಖವೆನಗೆ ನೀಡಿ ಸಲಹಯ್ಯ ಎನ್ನೊಡೊಯ|| ಸಖ ಮಾತರೀಶ ವಿಠಲ ದೇವರ ದೇವ||

ಎಪ್ಪತ್ತೆರಡು

  ಯಾಕೆ ನೀನೆಳೆತಂದೆ ಈ ದೇಶದೊಳಗೆ| ಸಾಕೆನಗೆನ್ನ ಜೀಯ||ಪ|| ನಾಕು ದಿನದ ಬಾಳ್ವೆ ವಿಧವಿಧ ವೇಷವದ| ನೇಕ ಕಟ್ಟುವುದಕ್ಕೆ||ಅ.ಪ|| ಸಾಕು ಸಾಕಯ್ಯ|ಬೇಕೆಂಬ ಬಯಕೆ| ಮನದ| ಮೂಕ ವೇದನೆಯ|ದೇಕೆ ಕೇಳಿಸದು| ಅಕಳಂಕ ದೇವ|ಬಕುಳಾ ದೇವಿಯ|ತನಯ| ಯಾಕೆ  ನೀ ಹೀಗೆ|ಮೂಕನಾದೆಯೋ||೧|| ಕಾಯವ ಸವೆಸಿ ಬಲು|ಭಯವಗೊಂಡೆನೀ|ಜಗದಿ| ಮಾಯವಿದೆಂತೋ|ದಯವದೋರಯ್ಯ| ಹಯವದನ ದೇವ|ಸಾಯುಜ್ಯ ಪದವ|ಕೊಟ್ಟು| ಭಯ ಭವದ ಕಳೆಯೊ|ಕಾಯಜ ಪಿತನೇ||೨|| ಮಾತರೀ ಪುರದ| ಪಿತ ವಿಠಲರಾಯ|ಎನ್ನ| ಮಾತ ಮನ್ನಿಸುತ|ಹಿತವ ಕಾಯುವುದು| ಕತ್ತಲೆಯ ಕಳೆದು|ಮತ್ತೆ ಬೆಳಗುವುದು|ಮನಕೆ| ಮತಿಯಿತ್ತು ತಿಳುಹ|ಬಿತ್ತಬೇಕಯ್ಯ||೩||

ಎಪ್ಪತ್ತೊಂದು

  ನಷ್ಟವಾಗುವ ಕಾಯಕ್ಕೆ| ಇಷ್ಟು ಹಂಬಲವೇತಕ್ಕೊ| ಸೃಷ್ಟಿಗೊಡೆಯ ಶ್ರೀಕೃಷ್ಣನ | ಇಷ್ಟದಿಂದ ಭಜಿಸೊ ಮನವೆ || ಪ || ಸೃಷ್ಟಿಗೆ ಬಂದಿಹ ಮೇಲೆ ಬಲು| ಕಷ್ಟವೆನಲು ಬೇಡ ಮುದ್ದು| ಕೃಷ್ಣನ ನೆನೆಯುತ ಸುಖ ಸಂ|ತುಷ್ಟಿಯ ಪಡೆಯೊ ನೀ ಮನವೆ|ಅ.ಪ||   ಅಲ್ಪತನ ಬಿಟ್ಟು ಸಾಗರ | ತಲ್ಪ ಶ್ರೀರಂಗ ಶಯನನ | ಸ್ವಲ್ಪದಿಂದ ನೆನೆದರೂ | ಎಲ್ಲ ಕಾಮನೆ ಸಲಿಸಿ ವರ | ಕಲ್ಪತರುವಿನ ತೆರದಿ ತಾ | ನೆಲ್ಲರ ಕಾಯುವೆನೆಂದು | ನಿಲ್ಲದೆ ನಿರತದಿ ಹರಿ ತಾ| ನೊಳ್ಳಿತ ಮಾಡುವ ಕಾಣಿರೊ||ನಷ್ಟ||   ಅಗ್ಗವಾದ ಜೀವನಕ್ಕೆ | ಒಗ್ಗಿಕೊಂಡು ಬಹಳ ಬಳಲಿ | ಮಗ್ಗುಲಿಗೆ ಹೊರಳಿಕೊಂಡು ನಿ | ತಗ್ಗಿನೊಳಗೆ ಬಿದ್ದೆಯಲ್ಲೊ| ಕೊಗ್ಗತನ ತೋರದಲೆ ಶಿರ | ಬಗ್ಗಿ ಹರಿಯ ಪದ ಜಪಿಸಲು | ಹಿಗ್ಗುತಲಿ ಪರಮ ಗತಿ ತಾ |ನೆಗ್ಗಿಲ್ಲದೆ ಕರುಣಿಸುವನು ||ನಷ್ಟ||   ಗದ್ದಿಗೆಗೆ ಆಸೆವಡೆಯುತ | ಕದ್ದು ಕನಕವ ಕೂಡಿಟ್ಟು |  ಬಿದ್ದು ನರಕದಿ ಕೆಟ್ಟೆನೈ | ಮುದ್ದು ಮುಖ ಮಂದಹಾಸನೆ|  ಬದ್ದನಾಗಿ ನಿನ್ನ ನೆನೆಯೆ | ಹದ್ದನೇರುತ ಬಳಿ ಬಂದು | ಉದ್ದರಿಸಿ ಸಲಹಲು ಬೇಕು | ಸಿದ್ಧ ಮಾತರೀಶ ವಿಠಲ ||ನಷ್ಟ||

ಎಪ್ಪತ್ತು

  ಮುಟ್ಟಿ ಭಜಿಸುವ ಕನಸ ಕಂಡೆನೆ|  ಪಟ್ಟಾಭಿರಾಮ ನಿನ್ನ ಪಾದ||ಪ|| ಮುಟ್ಟಿ ಭಜಿಪ ಕನಸ ಕಂಡೆನು| ಸೃಷ್ಟಿಯೊಳಗಿರ್ಪ ಸಕಲರ ಅ| ಭಿಷ್ಟ ಸಲಿಸಿ ಸಲಹುವ ಮಹಾ| ವಿಷ್ಣು ಮೂರುತಿಯ ಶ್ರೀ ಪಾದ||ಅ.ಪ|| ಸೂಕ್ಷ್ಮವಾದ ರೂಪ ಕಂಡೆನೊ| ಅಕ್ಷಿ ಅಂತರಂಗದ ಒಳಗಣ| ವಕ್ಷ ಸ್ಥಳದಿ ಸತಿಯ ತೋರಿದ| ಲಕ್ಷ್ಮೀ ಪತಿಯ ಪಾವನ ಪಾದ||ಮುಟ್ಟಿ|| ಲಕ್ಷ ಕೋಟಿ ರೂಪ ಕಂಡೆನೆ| ಚಕ್ಷು ದ್ವಯದಿ ಸಾಕ್ಷಿಯಾಗಿ| ಮೊಕ್ಷದಾಯಕನಾಗಿ ರಕ್ಷಿಪ| ಪಕ್ಷಿವಾಹನ ಶ್ರೀ ಹರಿ ಪಾದ||ಮುಟ್ಟಿ|| ಸ್ಥಿತಿಕರ್ತನವನ ಕಂಡು ಸರಿ| ಮಾತು ಹೊರಳದು ಉತ್ತಮಿಕೆಯಲಿ| ಮತಿಯಿತ್ತು ಮಂಗಳವ ಮಾಡುವ| ಮಾತರೀಶ ವಿಠ್ಠಲನ ಪಾದ||ಮುಟ್ಟಿ||

ಅರವತ್ತೊಂಬತ್ತು

  ದಾರಿಯ ಕಾಯುತಿರುವ | ವರ ಪ್ರಹ್ಲಾದರಾಯ | ನರಹರಿ ಬರುವನೆಂದು ||ಪ || ಬಿರಿದು ಕಂಬದೊಳಿಂದ | ನರಸಿಂಹ ತಾ ಬಂದ | ತರಳನ ಪೊರೆಯಲೆಂದು || ಅ.ಪ || ಊರೆಲ್ಲ ತಿರುಗಾಡಿ | ಸುರರೊಡೆಯ ಶ್ರೀ ಹರಿಯ | ಬಿರುದನು ಪಾಡಲೆಂದು | ನಾರಾಯಣ ನಾಮವ | ನಿರತದಿಂದ ನುಡಿಯುವ | ನಾರದ ಮುನಿಪ ಬಂದು || ದಾರಿಯ || ಅಗಣಿತ ಮಡುವಿನೊಳಗೆ | ಕೂಗುತಿರಲು ಕರಿರಾಜ | ಬಗೆಯೊಳು ಬರಲುಯೆಂದು | ಹಗೆಯಿಂದ ಕಾಲ್ಪಿಡಿದ | ನೆಗಳ ಕೊರಳನು ಹರಿದ | ಬೇಗದಿ ಹರಿಯು ಬಂದು || ದಾರಿಯ || ಭಕ್ತಗಡಣ ಸೇರಿತು | ಯುಕ್ತರೀತಿಯಿಂದಲಿ | ಭಕ್ತಿಯ ಮಾಡಲೆಂದು  | ಶಕ್ತದೈವರಗಂಡ | ಮಾತರೀಶ ವಿಠಲನು | ಮುಕ್ತಿಯ ನೀಡಲೆಂದು || ದಾರಿಯ ||

ಅರವತ್ತೆಂಟು

  ಕಾಯಲಾರೆ ಕಾಯಜಪಿತನೆ ನಿನ್ನ ಮಾಯ ಸಾಯುಜ್ಯವು ಒದಗಲಿಯೆಂದು ||ಪ|| ಕಾಯವ ಕಳೆದು ತೀರುವೆನು ಸಾಯುವ ಭಯವಿಲ್ಲವೆನಗೆ ||ಅ.ಪ|| ಹೊಟ್ಟೆಗಿಕ್ಕದೆ ನಿ ಮಟ್ಟ ಕೆಳಗಿರಿಸೆ ಸಿಟ್ಟಗೊಂಡು ಬಲು ಕೆಟ್ಟುಹೋಗೆನೋ ದಟ್ಟ ದುರಿತಗಳ ಕೊಟ್ಟರೂ ಕೂಡ ಮುಟ್ಟಿ ಪಾದದಿಂಬಿಟ್ಟು ಬದುಕುವೆನೊ || ಕಾಯ || ದುರಿತಭವ ರಾಶಿ ವರವಾಗಿ ಕೊಡಲು ಸಾರುವುದ ಬಿಡೆನು ಹರಿ ನಾಮಂಗಳ ಸಿರಿ ಮಾತರೀಶ ಕರುಣದಲಿ ಕಾಯೊ ಮರಣವೆಂಬಳುಕ ತೊರೆದಿರುವೆ ನಾನು|| ಕಾಯ ||

ಅರವತ್ತೇಳು

  ಎಲ್ಲರ ಮನೆಯೊಳಗಾಡು| ಗೊಲ್ಲ ಗೋಪಾಲಕೃಷ್ಣ ||ಪ|| ಎಲ್ಲರ ಮನದಿ| ಸಲ್ಲಿಸಿ ಸಲಹುವ ಬಲ್ಲಿದನಣ್ಣ | ಬಲರಾಮರ ಕೂಡಿ|| ಅ.ಪ|| ಮಕ್ಕಳೊಡಗೂಡಿ| ಅಕ್ಕರೆಯಿಂದಲಿ| ಶ್ರೀಕೃಷ್ಣ ಹರಿ ನೀ| ನಕ್ಕು ನಲಿಯುತ|| ಎಲ್ಲರ || ಚಿಣ್ಣರೊಡನಾಡಿ| ಮಣ್ಣನೆ ಮೆತ್ತುತ| ಬಣ್ಣದೋಕುಳಿಯ| ಪಣ್ಣನೆ ಹಾರಿಸಿ|| ಎಲ್ಲರ|| ಉಕ್ಕಿದ ಯಮುನೆಯ| ಸೊಕ್ಕಿನ ಉರಗನ| ಮುಕ್ಕಿ ಬಿಸಾಡಿದ| ಚೊಕ್ಕ ವಿಠಲ ಹರಿ|| ಎಲ್ಲರ|| ಸತ್ವ ಗುಣಪೂರ್ಣ| ಸತ್ಫಲದಾಯಕ| ಸತ್ಪುರುಷ ಸಿದ್ಧ| ಮಾತರೀಶ ಗುರು|| ಎಲ್ಲರ||