ಪೋಸ್ಟ್‌ಗಳು

ಐವತ್ತ ಐದು

  ಎನ್ನೊಳಗಿನ ತ್ರಾಣ ನಿನ್ನದೋ | ಅಂಜನಾಸುತ  ಮುಖ್ಯಪ್ರಾಣ ||ಪ|| ಭಿನ್ನಮಾಡದಲೆನ್ನ ಕಾಯೋ | ಮುನ್ನದಿ ಬಂದು ಭವಭಯಹರಣ||ಅ.ಪ||   ಚಂದ್ರಮನ ಸಂತೋಷದಲಿ ಕಂ- | ಡಂಬರಕೆ ಹಾರುತ ನಿಂದವನ | ತಿಂಬೆನೆಂದು ಹರುಷದಿಂ  ಪಡೆದ- | ನಂತ ವರಂಗಳ  ಹನುಮಂತಾ || ಎನ್ನೊಳ ||   ಲಂಘಿಸಿ ಲಂಕಾಪುರವ ಸುಟ್ಟೆ | ಭುಂಜಿಸುತಾ ವನದ ಫಲಂಗಳ| ಅಂಜದೆ ಸಂಜೀವನವ ತಂದು | ಕಂಜನಾಭನ ಚರಣಕೆರಗುತ || ಎನ್ನೊಳ || ಸುಂದರ ಮೂರುತಿ ಹನುಮಂತನ| ಸಂದೇಹವಿಲ್ಲದೆ ಸೇವಿಪರ| ಕುಂದಿಲ್ಲದಲೆ ಕಾಯ್ವನೊ ನಮ್ಮ| ಇಂದಿರೇಶ ಸಿರಿ ಮಾತರೀಶ || ಎನ್ನೊಳ ||

ಐವತ್ತನಾಲ್ಕು

  ಸ್ತುತಿಸಿರೋ ಮುನಿ ವಾದಿರಾಜನ ಭೂತರಾಜ ಸೇವಿತ ಪುಂಗವನ||ಪ|| ಮಾತೆ ಮಕ್ಕಳ ಪೊರೆವಂತೆ| ಭಕ್ತರನು ಪೊರೆಯುತಿರುವನ||ಅ.ಪ|| ಗದ್ದೆ ಗೌರಿಯೊಳು ಪುಟ್ಟಿ ತಾನು| ಸೋದೆಮಠ ಪರಂಪರೆಯ ಗಳಿಸಿ| ಮಧ್ವಮತವನು ಜಗಕೆ ಸಾರುತ| ಮುದ್ದು ಗೋವಿಂದನ ನೆನೆದವನ||ಸ್ತುತಿಪೆ|| ಕಡಲೆ ಬೇಯಿಸಿ ಬೆಲ್ಲದೊಳದ್ದಿ| ಮಡ್ಡಿ ಪ್ರಸಾದವನು ಮುನ್ನದಿ|  ಮಾಡಿಸಿ ಒಡೆಯ ಹಯವದನಂಗೆ| ಸಡಗರದಿ ಕೊಡುವ ಯತಿರಾಯನ||ಸ್ತುತಿಪೆ|| ವಿಷಯ ರಹಿತ ಭಕ್ತಜನಕೆಲ್ಲ ವಸುಮತಿಯೊಳಿಷ್ಟಾರ್ಥ ಕೊಡುವ ಕುಸುಮಪಾದ ಭಾವಿರುದ್ರನಿವ ಅಸಮ ಬಲ ಮಾತರೀಶವಿಠಲ||ಸ್ತುತಿಪೆ||

ಐವತ್ತ ಮೂರು

  ಕರಮುಗಿದು ಬಿನ್ನಪವು| ಪರಶುರಾಮ ಮುನಿಪನ ಚರಣದೊಳು| ಶರಣೆಂಬೆನೊ ಭವ ಋಣ| ಭಾರ ಕಳೆ ಹರಿ ಋಷಿವೇಷಧರನೆ||ಪ|| ಜಮದಗ್ನಿ ರೇಣುಕೆಯ ಮಗನಾಗಿ| ರಾಮ ಭಾರ್ಗವನೆನಿಸಿ ಮೆರೆದೆಯೊ| ಸೋಮ ಸಹಸ್ರ ಕ್ಷಾತ್ರ ತೇಜದಿ| ವಾಮ ಮಾರ್ಗದರಸರನು ತರಿದು| ಭೂಮಿಯತಿ ಭಾರವ ಕಳೆದವಗೆ||ಕರ|| ಮಂಡೆ ಮೇಲಿನ ಉಂಡೆಜಡೆ ಹರಡಿ ಕೆಂಡಗಣ್ಣಿನ ನೋಟವ ಬೀರುತ ದಂಡ ಪರಶು ಚಾಪ ಪಾಣಿಯಾಗಿ ಭಂಡ ನೃಪರನು ತುಂಡು ಮಾಡುತ ಗಂಡುಗಲಿ ರೂಪ ತೋರಿದವನಿಗೆ||ಕರ|| ಪಿತನ ವಾಕ್ಯವ ನಡೆಸಲುಯೆಂದು| ಮಾತೆ ಶಿರವನು ಕೊಡಲಿಯಲಿ ಕಡಿದ| ಸುತನ ಮೆಚ್ಚಿ ಪಿತ ವರವೀಯಲಿಕೆ| ಮತ್ತೆ ಮಾತೆಯನು ವರದೊಳು ಪಡೆದ| ಮಾತರೀಶ ವಿಠಲನ ಪ್ರಿಯನೊಳು||ಕರ||

ಐವತ್ತೆರಡು

  ಹರಿ ನಾಮವೆಂಬೊ ತರಂಗಿಣಿ | ಹರಿಯುತಲಿಹುದು| ಗುರು ಮಧ್ವ ವರ್ಷ ಧಾರೆಯಿಂದ||ಪ|| ದುರಿತ ಭವತಾಪ ರಾಶಿ ಕೊಚ್ಚಿ| ನಾರಾಯಣ ನಾಮ ವಾರಿಧಿಯ ಸೇರುತಿಹುದು||ಅ.ಪ|| ಹರಿನಾಮದೊರತೆ| ನೀರ ಹಾಯಿಸುತ| ಪರಮಪದವಿಯನು| ಸೇರುವುದಕೆಂದು||ಹರಿ|| ಹುಟ್ಟೆಂಬ ನೌಕೆಗೆ| ಇಟ್ಟು ಪಟಹಾಯಿ| ಹುಟ್ಟು ಹಾಕಿ ದಡ| ಮುಟ್ಟುವುದಕೆಂದು||ಹರಿ|| ಬೆಪ್ಪ ನಾ ಕೂತು| ತೆಪ್ಪನೇರದಲೆ| ತಿಪ್ಪೆ ಸೇರಿದೆನೊ| ಮುಪ್ಪು ತಾನೆರೆದು||ಹರಿ|| ಗುರು ಮಾತರೀಶ| ವರ ವಿಠಲ ರಾಯ| ಕರೆದು ಭವ ತೀರ| ಸೇರಿಸುವೆನೆಂದು||ಹರಿ||

ಐವತ್ತೊಂದು

  ಆಡಲು ಪೋಗೊ ರಂಗ| ಕುಡಿತೆ ಹಾಲನುಗುಡಿದು||ಪ|| ಒಡಲು ಹಸಿವುದು ನಿನಗೆ| ಬೇಡವೆನ್ನಲು ಬೇಡ||ಅ.ಪ|| ಎಂಟನೆ ಕುವರ ಬಾರೊ| ತುಂಟ ಚೋರನೆ ಬಾರೊ| ಕಂಠವೊಣಗಿತು ನಿನಗೆ| ಕುಂಟು ನೆಪವನು ಬಿಟ್ಟು||ಆಡಲು|| ದೃಷ್ಟಿ ಬೊಟ್ಟನುಯಿಡುವೆ| ಸೃಷ್ಟಿಗೊಡೆಯನೆ ಬಾರೊ| ಮುಷ್ಟಿ ಮಣ್ಣಿಯ ತಿಂದು| ತುಷ್ಟಿಯಿಂದಲಿ ಬೇಗ||ಆಡಲು|| ಜಗಳವಾಡಲು ಬೇಡ| ಖಗವನೇರಲು ಬೇಡ| ಮುಗುಳುನಗುತಲಿ ಬಂದು| ಅಗುಳನ್ನ ನೀಯುಂಡು||ಆಡಲು|| ಮಾತ ಕೇಳೆಲೊ ನೀನು| ಸೋತು ಪೋದೆನೊ ನಾನು| ಮಾತರೀಶ ವಿಠಲನೆ| ಎತ್ತಿ ಕೊಳ್ಳುವೆ ಬಾರೊ||ಆಡಲು||

ಐವತ್ತು

  ಯಾರಿವನೆಂದು ಪೇಳಿ ಒಗಟೊಂದ ಕೇಳುವೆನು| ಸರಿಯುತ್ತರವ ನೀಡುವುದು ಬಲ್ಲವರೆಲ್ಲರು||ಪ|| ಗೊಲ್ಲ ಕುಲದೊಳು ಪುಟ್ಟಿದನಂತ ಬಾಲ ಲೀಲೆಯ ತೋರಿದನಂತೆ| ಒಳ್ಳೆ ಬೆಣ್ಣೆಯ ಮೆದ್ದಿಹನಂತೆ| ಮಲ್ಲ ಖಳರನು ಕೊಂದಿಹನಂತೆ| ಎಲ್ಲ ಭಕುತರ ಪೊರೆಯುವನಂತೆ||ಯಾರಿವ|| ನವಿಲುಗರಿಯನ್ನಿಟ್ಟ ಮುಕುಟನ| ಹಾವಿನ ತಲೆಯ ಮೆಟ್ಟಿದಾತನ| ಭುವನವೀರೇಳು ಕಾಯ್ದಾತನ| ಮಾವನೆಂಬನ ಮುಕ್ಕಿ ಬಿಸುಟನ| ಮಾನಿನಿಯರ ತಾ ಸಲಹಿದವನ||ಯಾರಿವ|| ಮಾಯ ರಕ್ಕಸಿಯ ಮೊಲೆಯಗುಡಿದು| ತಾಯಿಗೆ ಬಾಯಲಿ ಜಗವದೋರಿ| ಮಾಯ ಕುವಾದಿಗಳ ಸೋಲಿಸಿದ| ರಾಯ ಮಧ್ವಗೊಲಿದು ಬಂದ ಭವ| ಭಯ ನಾಶಿ ಮಾತರೀಶ ವಿಠಲ||ಯಾರಿವ||

ನಲವತ್ತೊಂಬತ್ತು

  ಹರಿನಾಮವೆಂಬ ಪರಮ ವರದಾನ| ಗುರುಕರುಣೆಯಿಂದೆಮಗೆ ದೊರಕಿತಯ್ಯ ||ಪ|| ಗುರುವಿನಂಘ್ರಿ ನಂಬಿದರ್ಗೆ | ಪರಮಪದದವು ಸಿಗಲುಂಟು||ಅ.ಪ||  ಹರಿಯೆನಗೆ ನಯನವಿತ್ತ| ಹರಿಯ ತೋರ್ವ ದೃಷ್ಠಿ ಗುರುವಿತ್ತ| ಶಿರವೆನಗೆ ತಾ ಹರಿಯಿತ್ತ| ಪರಿಪರಿ ಬುದ್ದಿಯನು ಗುರುವಿತ್ತ||ಹರಿನಾಮ|| ಕರಯುಗಳ ಹರಿಯೆನಗಿತ್ತ| ಕರಮುಗಿವ ಬುದ್ದಿಯ ಗುರುವಿತ್ತ| ಚರಣದ್ವಯವು ಹರಿಯಿಂದ| ಚರಣಭಜಿಪ ಯೋಗ ಗುರುವಿಂದ||ಹರಿನಾಮ|| ಈ ದೇಹವದು ಹರಿಯಿಂದ| ಸಾಧನವಾಯಿತದು ಗುರುವಿಂದ| ವಿಧಿಲಿಖಿತ ಹರಿಯೆನಗಿತ್ತ| ಬದುಕು ಹಸನಾಯಿತು ಗುರುವಿಂದ||ಹರಿನಾಮ|| ಸತತ ಗುರುಸೇವೆ ಮಾಳ್ಪರ| ಉತ್ತಮಿಕೆಯಿಂದಲಿ ಕಾಯ್ವ ಹರಿ| ಪರಮಪುರುಷ ಪರಮಾತ್ಮ| ಮಾತರೀಶ ವಿಠಲ ಗೋವಿಂದ||ಹರಿನಾಮ||