ಪೋಸ್ಟ್‌ಗಳು

ಸೆಪ್ಟೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಪ್ಪತ್ತೆರಡು

  ಯಾಕೆ ನೀನೆಳೆತಂದೆ ಈ ದೇಶದೊಳಗೆ| ಸಾಕೆನಗೆನ್ನ ಜೀಯ||ಪ|| ನಾಕು ದಿನದ ಬಾಳ್ವೆ ವಿಧವಿಧ ವೇಷವದ| ನೇಕ ಕಟ್ಟುವುದಕ್ಕೆ||ಅ.ಪ|| ಸಾಕು ಸಾಕಯ್ಯ|ಬೇಕೆಂಬ ಬಯಕೆ| ಮನದ| ಮೂಕ ವೇದನೆಯ|ದೇಕೆ ಕೇಳಿಸದು| ಅಕಳಂಕ ದೇವ|ಬಕುಳಾ ದೇವಿಯ|ತನಯ| ಯಾಕೆ  ನೀ ಹೀಗೆ|ಮೂಕನಾದೆಯೋ||೧|| ಕಾಯವ ಸವೆಸಿ ಬಲು|ಭಯವಗೊಂಡೆನೀ|ಜಗದಿ| ಮಾಯವಿದೆಂತೋ|ದಯವದೋರಯ್ಯ| ಹಯವದನ ದೇವ|ಸಾಯುಜ್ಯ ಪದವ|ಕೊಟ್ಟು| ಭಯ ಭವದ ಕಳೆಯೊ|ಕಾಯಜ ಪಿತನೇ||೨|| ಮಾತರೀ ಪುರದ| ಪಿತ ವಿಠಲರಾಯ|ಎನ್ನ| ಮಾತ ಮನ್ನಿಸುತ|ಹಿತವ ಕಾಯುವುದು| ಕತ್ತಲೆಯ ಕಳೆದು|ಮತ್ತೆ ಬೆಳಗುವುದು|ಮನಕೆ| ಮತಿಯಿತ್ತು ತಿಳುಹ|ಬಿತ್ತಬೇಕಯ್ಯ||೩||

ಎಪ್ಪತ್ತೊಂದು

  ನಷ್ಟವಾಗುವ ಕಾಯಕ್ಕೆ| ಇಷ್ಟು ಹಂಬಲವೇತಕ್ಕೊ| ಸೃಷ್ಟಿಗೊಡೆಯ ಶ್ರೀಕೃಷ್ಣನ | ಇಷ್ಟದಿಂದ ಭಜಿಸೊ ಮನವೆ || ಪ || ಸೃಷ್ಟಿಗೆ ಬಂದಿಹ ಮೇಲೆ ಬಲು| ಕಷ್ಟವೆನಲು ಬೇಡ ಮುದ್ದು| ಕೃಷ್ಣನ ನೆನೆಯುತ ಸುಖ ಸಂ|ತುಷ್ಟಿಯ ಪಡೆಯೊ ನೀ ಮನವೆ|ಅ.ಪ||   ಅಲ್ಪತನ ಬಿಟ್ಟು ಸಾಗರ | ತಲ್ಪ ಶ್ರೀರಂಗ ಶಯನನ | ಸ್ವಲ್ಪದಿಂದ ನೆನೆದರೂ | ಎಲ್ಲ ಕಾಮನೆ ಸಲಿಸಿ ವರ | ಕಲ್ಪತರುವಿನ ತೆರದಿ ತಾ | ನೆಲ್ಲರ ಕಾಯುವೆನೆಂದು | ನಿಲ್ಲದೆ ನಿರತದಿ ಹರಿ ತಾ| ನೊಳ್ಳಿತ ಮಾಡುವ ಕಾಣಿರೊ||ನಷ್ಟ||   ಅಗ್ಗವಾದ ಜೀವನಕ್ಕೆ | ಒಗ್ಗಿಕೊಂಡು ಬಹಳ ಬಳಲಿ | ಮಗ್ಗುಲಿಗೆ ಹೊರಳಿಕೊಂಡು ನಿ | ತಗ್ಗಿನೊಳಗೆ ಬಿದ್ದೆಯಲ್ಲೊ| ಕೊಗ್ಗತನ ತೋರದಲೆ ಶಿರ | ಬಗ್ಗಿ ಹರಿಯ ಪದ ಜಪಿಸಲು | ಹಿಗ್ಗುತಲಿ ಪರಮ ಗತಿ ತಾ |ನೆಗ್ಗಿಲ್ಲದೆ ಕರುಣಿಸುವನು ||ನಷ್ಟ||   ಗದ್ದಿಗೆಗೆ ಆಸೆವಡೆಯುತ | ಕದ್ದು ಕನಕವ ಕೂಡಿಟ್ಟು |  ಬಿದ್ದು ನರಕದಿ ಕೆಟ್ಟೆನೈ | ಮುದ್ದು ಮುಖ ಮಂದಹಾಸನೆ|  ಬದ್ದನಾಗಿ ನಿನ್ನ ನೆನೆಯೆ | ಹದ್ದನೇರುತ ಬಳಿ ಬಂದು | ಉದ್ದರಿಸಿ ಸಲಹಲು ಬೇಕು | ಸಿದ್ಧ ಮಾತರೀಶ ವಿಠಲ ||ನಷ್ಟ||

ಎಪ್ಪತ್ತು

  ಮುಟ್ಟಿ ಭಜಿಸುವ ಕನಸ ಕಂಡೆನೆ|  ಪಟ್ಟಾಭಿರಾಮ ನಿನ್ನ ಪಾದ||ಪ|| ಮುಟ್ಟಿ ಭಜಿಪ ಕನಸ ಕಂಡೆನು| ಸೃಷ್ಟಿಯೊಳಗಿರ್ಪ ಸಕಲರ ಅ| ಭಿಷ್ಟ ಸಲಿಸಿ ಸಲಹುವ ಮಹಾ| ವಿಷ್ಣು ಮೂರುತಿಯ ಶ್ರೀ ಪಾದ||ಅ.ಪ|| ಸೂಕ್ಷ್ಮವಾದ ರೂಪ ಕಂಡೆನೊ| ಅಕ್ಷಿ ಅಂತರಂಗದ ಒಳಗಣ| ವಕ್ಷ ಸ್ಥಳದಿ ಸತಿಯ ತೋರಿದ| ಲಕ್ಷ್ಮೀ ಪತಿಯ ಪಾವನ ಪಾದ||ಮುಟ್ಟಿ|| ಲಕ್ಷ ಕೋಟಿ ರೂಪ ಕಂಡೆನೆ| ಚಕ್ಷು ದ್ವಯದಿ ಸಾಕ್ಷಿಯಾಗಿ| ಮೊಕ್ಷದಾಯಕನಾಗಿ ರಕ್ಷಿಪ| ಪಕ್ಷಿವಾಹನ ಶ್ರೀ ಹರಿ ಪಾದ||ಮುಟ್ಟಿ|| ಸ್ಥಿತಿಕರ್ತನವನ ಕಂಡು ಸರಿ| ಮಾತು ಹೊರಳದು ಉತ್ತಮಿಕೆಯಲಿ| ಮತಿಯಿತ್ತು ಮಂಗಳವ ಮಾಡುವ| ಮಾತರೀಶ ವಿಠ್ಠಲನ ಪಾದ||ಮುಟ್ಟಿ||

ಅರವತ್ತೊಂಬತ್ತು

  ದಾರಿಯ ಕಾಯುತಿರುವ | ವರ ಪ್ರಹ್ಲಾದರಾಯ | ನರಹರಿ ಬರುವನೆಂದು ||ಪ || ಬಿರಿದು ಕಂಬದೊಳಿಂದ | ನರಸಿಂಹ ತಾ ಬಂದ | ತರಳನ ಪೊರೆಯಲೆಂದು || ಅ.ಪ || ಊರೆಲ್ಲ ತಿರುಗಾಡಿ | ಸುರರೊಡೆಯ ಶ್ರೀ ಹರಿಯ | ಬಿರುದನು ಪಾಡಲೆಂದು | ನಾರಾಯಣ ನಾಮವ | ನಿರತದಿಂದ ನುಡಿಯುವ | ನಾರದ ಮುನಿಪ ಬಂದು || ದಾರಿಯ || ಅಗಣಿತ ಮಡುವಿನೊಳಗೆ | ಕೂಗುತಿರಲು ಕರಿರಾಜ | ಬಗೆಯೊಳು ಬರಲುಯೆಂದು | ಹಗೆಯಿಂದ ಕಾಲ್ಪಿಡಿದ | ನೆಗಳ ಕೊರಳನು ಹರಿದ | ಬೇಗದಿ ಹರಿಯು ಬಂದು || ದಾರಿಯ || ಭಕ್ತಗಡಣ ಸೇರಿತು | ಯುಕ್ತರೀತಿಯಿಂದಲಿ | ಭಕ್ತಿಯ ಮಾಡಲೆಂದು  | ಶಕ್ತದೈವರಗಂಡ | ಮಾತರೀಶ ವಿಠಲನು | ಮುಕ್ತಿಯ ನೀಡಲೆಂದು || ದಾರಿಯ ||

ಅರವತ್ತೆಂಟು

  ಕಾಯಲಾರೆ ಕಾಯಜಪಿತನೆ ನಿನ್ನ ಮಾಯ ಸಾಯುಜ್ಯವು ಒದಗಲಿಯೆಂದು ||ಪ|| ಕಾಯವ ಕಳೆದು ತೀರುವೆನು ಸಾಯುವ ಭಯವಿಲ್ಲವೆನಗೆ ||ಅ.ಪ|| ಹೊಟ್ಟೆಗಿಕ್ಕದೆ ನಿ ಮಟ್ಟ ಕೆಳಗಿರಿಸೆ ಸಿಟ್ಟಗೊಂಡು ಬಲು ಕೆಟ್ಟುಹೋಗೆನೋ ದಟ್ಟ ದುರಿತಗಳ ಕೊಟ್ಟರೂ ಕೂಡ ಮುಟ್ಟಿ ಪಾದದಿಂಬಿಟ್ಟು ಬದುಕುವೆನೊ || ಕಾಯ || ದುರಿತಭವ ರಾಶಿ ವರವಾಗಿ ಕೊಡಲು ಸಾರುವುದ ಬಿಡೆನು ಹರಿ ನಾಮಂಗಳ ಸಿರಿ ಮಾತರೀಶ ಕರುಣದಲಿ ಕಾಯೊ ಮರಣವೆಂಬಳುಕ ತೊರೆದಿರುವೆ ನಾನು|| ಕಾಯ ||

ಅರವತ್ತೇಳು

  ಎಲ್ಲರ ಮನೆಯೊಳಗಾಡು| ಗೊಲ್ಲ ಗೋಪಾಲಕೃಷ್ಣ ||ಪ|| ಎಲ್ಲರ ಮನದಿ| ಸಲ್ಲಿಸಿ ಸಲಹುವ ಬಲ್ಲಿದನಣ್ಣ | ಬಲರಾಮರ ಕೂಡಿ|| ಅ.ಪ|| ಮಕ್ಕಳೊಡಗೂಡಿ| ಅಕ್ಕರೆಯಿಂದಲಿ| ಶ್ರೀಕೃಷ್ಣ ಹರಿ ನೀ| ನಕ್ಕು ನಲಿಯುತ|| ಎಲ್ಲರ || ಚಿಣ್ಣರೊಡನಾಡಿ| ಮಣ್ಣನೆ ಮೆತ್ತುತ| ಬಣ್ಣದೋಕುಳಿಯ| ಪಣ್ಣನೆ ಹಾರಿಸಿ|| ಎಲ್ಲರ|| ಉಕ್ಕಿದ ಯಮುನೆಯ| ಸೊಕ್ಕಿನ ಉರಗನ| ಮುಕ್ಕಿ ಬಿಸಾಡಿದ| ಚೊಕ್ಕ ವಿಠಲ ಹರಿ|| ಎಲ್ಲರ|| ಸತ್ವ ಗುಣಪೂರ್ಣ| ಸತ್ಫಲದಾಯಕ| ಸತ್ಪುರುಷ ಸಿದ್ಧ| ಮಾತರೀಶ ಗುರು|| ಎಲ್ಲರ||

ಅರುವತ್ತಾರು

  ನೀರ ತರಲು ಪೋಗೋಣ ಬಾರೆ|  ತ್ವರದಲಿ ಒದಗು ನೀರಜ ನಯನೆ||ಪ|| ಪೋರನು ಎದ್ದರೆ ದಾರಿಯು ತೋಚದು| ಕರಕರೆ ಮಾಡುವ ರಚ್ಚೆಯ ಹಿಡಿಯುತ||ಅ.ಪ|| ಅಟ್ಟಾಡಿ ಆವಿ|ನೊಟ್ಟಿಗೆ ಪೋಗುವ| ಪಟ್ಟನು ಬಿಡದಲೆ|ಚಿಟ್ಟೆಯ ಹಿಡಿಯುವ| ಮುಟ್ಟಿ ಫಣಿಹೆಡೆಗೆ| ಕುಟ್ಟುತ ಕುಣಿಯುವ| ಅಟ್ಟುತ ಅಣ್ಣಗೆ| ಪೆಟ್ಟನು ಕೊಡುವನೆ||ನೀರ|| ಸದ್ದನು ಮಾಡದೆ|ಹದ್ದನು ಏರುವ| ಬುದ್ದಿಯು ಇಲ್ಲದೆ|ಕದ್ದನೆ ಬೆಣ್ಣೆಯ| ಬಿದ್ದು ತಾನೆದ್ದು|ಗುದ್ದುವ ಮಲ್ಲರ| ಎದ್ದರೆ ಅಳುವನಿ|ಮುದ್ದು ಶ್ರೀಕೃಷ್ಣ||ನೀರ|| ನಾರಿಯರೆಲ್ಲರ|ಸೀರೆಯ ಕದಿಯುವ| ಚೋರನವನು ನರ|ಹರಿ ನಾರಾಯಣ| ಸಿರಿ ಮಾತರೀಶ|ವರ ವಿಠಲರಾಯ| ನಿರತದಿಂದ ಭಕು|ತರ ಪೊರೆಯುತಿರುವ||ನೀರ||

ಅರುವತ್ತ ಐದು

  ಹೆಮ್ಮೆ ಪಡುವುದ್ಯಾತಕೋ? ಕು-| ಕರ್ಮಭರಿತ ನಷ್ಟ ಕಾಯಕೆ| ಮರ್ಮ ತಿಳಿದು ನಡೆಯೊ ಸಾವೆಂಬ| ಗುಮ್ಮ ಅಣಕಿಸುತಲಿರಲಾಗಿ||ಪ|| ಚೆಂದದ ಜೀವವಿದೆಂದು| ಗಂಧ ಪನ್ನೀರ ಪೂಸಿ| ಅಂದದಲಿರುವೆಯೆಂದರೆ| ಬಂದು ನಿಲುವ ಯಮಭಟನು||ಹೆಮ್ಮೆ|| ಕುಂದು ಬಾರದಿರಲೆಂದು| ಸಂದು ಸಂದಿಲಿ ಅವಿತೆಡೆ| ಮಂದಮತಿಯೆ ಈ ಅಸುವ| ಮುಂದೊತ್ತಲಾರೆ ತಿಳಿಯೊ|| ಹೆಮ್ಮೆ|| ಇಂದು ನಾಳೆ ನಾಡಿದ್ದು| ಎಂದಾದರೊಂದು ದಿನದಿ| ಬಂದೆರಗುವ ಪರಗತಿಗೆ| ನಿಂದು ಕಾಯೊ ಮೂಢಾತ್ಮ||ಹೆಮ್ಮೆ|| ಇಂದು ಮಾತರೀಶನನು| ಚೆಂದದಿಂದ ನೆನೆಯಲಿಕೆ| ಇಂದಿರಾ ರಮಣನು ಆ-| ನಂದದಲಿ ಪೊರೆವ ಕಾಣೊ||ಹೆಮ್ಮೆ||

ಅರುವತ್ತ ನಾಲ್ಕು

  ಅಂತರಂಗದಿ ಅವಿತಿರುವ| ಸಂತ ನೀನೆದ್ದು ಬಾರಯ್ಯ||ಪ|| ಚಿಂತೆಯೆಂಬುದ ನೀಗಿ| ಕಂತು ಪಿತನ ತೋರಯ್ಯ||ಅ.ಪ|| ಮಲಿನವಾಗಿಹ ಮೈಯ| ಜಲದೊಳು ತೊಳೆದರೆ ಸಲೆ| ಕೊಳೆತು ನಾರೊದಲ್ಲದೆ| ಮಲವೆಂಬುದಿಂಗದು|| 1 || ಒಳಮನವ ಭಕ್ತಿಯಲಿ| ತೊಳೆದು ಮಜ್ಜನ ಮಾಡಿ| ಹೊಳೆವ ಪಾದ ನೆನೆಯಲು| ಕಳೆಯವುದು ಪಾಪಗಳು|| 2 || ಅನುದಿನದಿ ನೀಯೆನ್ನ| ಮನಮಂದಿರದಿ ನೆಲೆಸಿ| ತನುವ ನೇಗಿಲು ಮಾಡಿ| ಮನಸಜ ಪಿತನ ತೋರು|| 3 || ಉತ್ತಿ ಹದವನು ಮಾಡಿ| ಬಿತ್ತು ಭಕ್ತಿಯ ಬೀಜ| ಮಾತರೀಶ ವಿಠಲನ| ಸತ್ಯ ದರ್ಶನ ಮಾಡೊ|| 4 ||

ಅರುವತ್ತ ಮೂರು

  ರಂಗಪೂಜೆಯ ನೋಡಿರೊ||ಪ|| ಮಂಗಳಾಂಗ ಜಗದೊಡೆಯ| ಪಾಂಡುರಂಗ ಶ್ರೀ ಹರಿಯ||ಅ.ಪ|| ದಂಡೆಯನ್ನವನ್ನಿಟ್ಟು| ಉಂಡೆಯಪ್ಪವ ಬಿಡಿಸಿ| ತಾಂಬೂಲ ಕ್ರಮುಕದಿ| ಸಿಂಗರಿಸಿ ಮಾಡುವ||ರಂಗ|| ಬಾಳೆ ನಾರಲಿ ನೆಯ್ದ| ಎಳೆ ಹಿಂಗಾರ ಹೂವ| ಬಲು ಅಂದದಿ ಜೋಡಿಸಿ| ಸಾಲುದೀಪ ಹಚ್ಚುತ||ರಂಗ|| ಮಂಗಳಾಂಗಿಯರೆಲ್ಲ-| ನಂಗಜನಕ ರಂಗನ| ಹಿಂಗದೆ ಪಾಡುತ ಹರಿ| ಮಂಗಳವ ಮಾಡೆಂದು||ರಂಗ|| ಅತಿಶಯದಿ ಪೂಜಿಪರ| ಸತತ ಪೊರೆಯುವೆನೆಂದು| ಮಾತಗುಡುತಿರುವ ಸಿರಿ| ಮಾತರೀಶ ವಿಠಲನ||ರಂಗ||

ಅರುವತ್ತೆರಡು

  ಕಾಲನ ದೂತರು|ಕಾಲನ್ನೆಳೆವಾಗ ಗೋಳನ್ನಿಟ್ಟರೆ ಫಲವೇನು? ಹೆಳವನ ಕೂಡಿ| ಮೇಳದಿ ಕುಣಿಯಲು ಮೂಳಿಗಾಗುವ ಒಳಿತೇನು? ಪಾಲಿಗೆ ಬಂದ|ಕೆಲಸವ ಮಾಡದೆ ಮೂಲೆಯ ಸೇರಿದ ಬಲುವೇನು? ಬಾಲಮುಕುಂದನ|ಲೀಲವಿನೋದವ ಕೇಳದೆಯಿರುವ ಛಲವೇನು? ಪರಮಭಕ್ತಿಯಲಿ|ಅರಿತು ಭಜಿಸುವರ ಮೆರೆಸುವನಾರು ಗೊತ್ತೇನು? ಸಿರಿ ಮಾತರೀಶ|ವರ ವಿಠಲರಾಯ ಕರುಣದಿ ಪೊರೆವ ಕಾಮಧೇನು.

ಅರವತ್ತೊಂದು

  ರಾಮ ರಾಮರೆಂಬೆರಡಕ್ಷರದ| ನಾಮದ ಬಲವ ಕಂಡಿರೇನು?||ಪ|| ಯಾಮಯಾಮಕೆ ನೆನೆವರ| ಬಲು| ಕಾಮಿತಫಲಗಳನೆಲ್ಲ| ಅತಿ| ಪ್ರೇಮದಿ ಕೊಟ್ಟು ರಕ್ಷಿಸುವಂಥ||ಅ.ಪ|| ಪರಮ ತೋಷದಿಂದ ರಾಮ ನಾಮವ| ಮರುತಾತ್ಮಜ ತಾ ಮರೆಯದೆ ಪಾಡಲು| ಪರಿಕಿಸಿ ವಾರಿಧಿ ಲಂಘನಗೈಯುತ| ಕುರುಹನು ತಂದು ತರಳೆಗೆಯಿತ್ತಂಥ||ರಾಮ| ವರ ವಿಭಿಷಣನಿಗೆ  ಅಭಯವನಿತ್ತು| ವೀರ ಸುಗ್ರೀವಗಾಲಿಂಗನ ಕೊಟ್ಟು| ಶರಧಿಯ ಮೇಲೆ ಸೇತುವೆ ಮಾಡಿ ದಶ-| ಶಿರದಸುರನಾ ಖಂಡಿಸಿ ಮೆರೆದಂಥ||ರಾಮ|| ಕರ್ಮದ ಫಲಂಗಳ ಸುಟ್ಟು ಹಾಕುವ| ಮರ್ಮಂಗಳ ತಿಳಿದು ನಾಮವ ಪರ-| ಮಾರ್ಥದಿ ಸಲೆ ಪಾಡಲು ಆತ್ಮಾನುಗ-| ತಾರ್ಥವ ತಿಳಿದು ಮೋಕ್ಷವಕೊಡುವಂಥ||ರಾಮ|| ಸತತದಿಂದ ನಾಮ ಪಾಡಿದವರಿಗೆ| ಉತ್ತರಮಾಗುವುದೈ ಸಂಪದಗಳು| ಉತ್ತರಶ್ರೇಯಗಳನ್ನಿತ್ತು ಪೊರೆವ| ಚಿತ್ತಭವಪಿತ ಮಾತರೀಶ ವಿಠಲ||ರಾಮ||

ಅರುವತ್ತು

  ಕಪ್ಪ ಕಾಣಿಕೆ ಕೊಡ ಬೇಕು|ಜಗ| ದಪ್ಪ ಶ್ರೀರಂಗ ದೊರೆಗೆ||ಪ|| ಒಪ್ಪಿಕೊಂಡು ನಿನ್ನ ಚರಣ-| ವಪ್ಪಿಕೊಂಡಿರುವೆ ನಿತ್ಯದ| ತಪ್ಪು ಸಾಸಿರಗಳನೆಲ್ಲ| ತಪ್ಪಿಸಿ ಸಲಹುತಿಹ ಜೀಯಗೆ||ಕಪ್ಪ|| ರಾಜಸಭೆಯ ನಡೆಸಿ ಜಗದ| ವ್ಯಾಜ್ಯ ದೂರುಗಳನ್ನೆಲ್ಲ| ರಾಜಿ ಮಾಡಿ ಕೊಡುವೆನೆನುತ| ಸಜ್ಜನರಗ ಕಳೆಯುತಿರುವಗೆ||ಕಪ್ಪ|| ಬಗ್ಗಿಕೊಂಡಿರುವೆನೋ ನಾನು| ಅಗಣಿತಗುಣ ನಿನ್ನ ಚರಣ-| ಕೊಗ್ಗಿ ಕೊಂಡಿರುವೆನಗತಿ| ವೆಗ್ಗಳ ಸಂಪದವ ಕೊಡುವಗೆ||ಕಪ್ಪ|| ನಿತ್ಯ ಸೇವೆ ಮಾಳ್ಪಗಿತ್ತ| ಮಾತನುಳಿಸಿ ಕೊಡುವೆನೆಂದು| ಉತ್ತಮ ವಾಜಿಯನೇರಿದ| ಮಾತರೀಶ ವಿಠಲ ರಾಯಗೆ||ಕಪ್ಪ||

ಐವತ್ತೊಂಬತ್ತು

  ದಾಸನಾಗ ಬೇಕೆಂಬ ಹಂಬಲವದೇಕೊ| ವಾಸುದೇವನೆಂಬೊಂದು ನಾಮವೇ ಸಾಕು| ದೋಷಾತೀತಂಗಳನು ಹಿಂಗಿಸುವುದಕೆ||ಪ|| ಏಸು ಜನ್ಮ ಪಡೆದು| ಘಾಸಿಗೊಂಡೆನಯ್ಯ| ವಾಸಿಯಾಗದ ಭವ|ರಾಶಿ ದೋಷದಿಂದ| ಹುಸಿಯಾದ ಜೀವ|ದಾಸೆಗೆ ನಾ ಬಿದ್ದು| ಮೋಸಹೋದೆನಯ್ಯ|ಶ್ರೀಶ ನಿನ್ನಮರೆತು||೧|| ಸೆಂಡಿಯೊಂದ ಬಿಟ್ಟು|ಮುಂಡನವನು ಮಾಡಿ| ಗಿಂಡಿಗಲಶ ತಿಕ್ಕಿ|ಮಿಂದು ಮಡಿಯುಟ್ಟು| ಉಂಡೆ ನಾಮ ಬಳಿದು|ಭಂಡತನವ ತೋರಿ| ಕಂಡ ಮನೆ ಪೊಕ್ಕು| ಉಂಡು ತಿರುಗುವುದಕೆ||೨|| ಹರಿಯ ನಾಮ ಪಾಡು|ವರನು ಅರ್ತಿಯಿಂದ| ಪರಮ ಪದವಿಯಿತ್ತು|ಬಿರುದ ಕೊಡುವ ನಮ್ಮ| ಸರಸಿಜನಾಭ ಶ್ರೀ|ಕೃಷ್ಣ ಮಾತರೀಶ| ವರದ ವಿಠಲ ರಾಯ|ಕರೆದು ಮುಕ್ತಿ ಕೊಡಲು||೩||

ಐವತ್ತೆಂಟು

  ಹರಿಯ ತೋಟದಲ್ಲರಳಿದ ಹೂವುಗಳು| ಕರುಣಾಮೃತವ ಬೀರುತಿವೆ ನೋಡಿ||ಪ|| ಶರಣುಬಂದವರ ಮರಳು ಮಾಡುತಿದೆ| ಹರಿಪಾದಪದ್ಮ ಪರಿಮಳದ ಮೋಡಿ||ಅ.ಪ|| ಬಂಡೆಯೆಡೆಯೊಳಗೊಂದು|ದಂಡೆ ಕಡೆಯೊಳಗೊಂದು| ಮೊಂಡೆಲೆ ಗಿಡದಿ ಬೆಳೆದ|ದುಂಡು ಮಲ್ಲಿಗೆ ಹೂವು| ಕಂಡು ಕಾಣದ ಹೂವು|ಮಂಡೆಗಾಗದ ಹೂವು| ಹಿಂಡುಹಿಂಡಲಿ ಬೆಳೆದ|ಗೆಂಡಸಂಪಿಗೆ ಹೂವು||ಹರಿಯ|| ಬಳುಕು ಲತೆಯೊಳು ಹೂವು|ತಳಿರಪತ್ರದ ಹೂವು| ಬೆಳ್ಳಿ ಬಣ್ಣದ ಹೂವು| ಬಳ್ಳಿ ಜಾಜಿಯ ಹೂವು| ಮುಳ್ಳು ಗಿಡದಲಿ ಹೂವು|ಕಳ್ಳ ಕದಿಯದ ಹೂವು| ಬಾಳಿ ಬದುಕುವ ಹೂವು| ಒಳ್ಳೆ ತಾವರೆ ಹೂವು||ಹರಿಯ|| ಸತ್ವ ಪಡೆದಿಹ ಹೂವು|ಸತ್ಯ ಲೋಕದ ಹೂವು| ನಿತ್ಯ ಮುಡಿಯುವ ಹೂವು|ಮತ್ತೆ ಮಸಣದ ಹೂವು| ಸತ್ತು ಹೋಗಲು ಕೊರಳ| ಸುತ್ತು ಮಾಲೆಯ ಹೂವು| ಮಾತರೀಶ ವಿಠಲನ|ಮುಕ್ತಿಧಾಮದ ಹೂವು||ಹರಿಯ||

ಐವತ್ತೇಳು

  ಬೇಡಿಕೊಳ್ಳಲು ನೀನೇನ ಕೊಡಬಲ್ಲೆ| ಮಾಡಿದ ಪಾಪಗಳಗಣಿತವಾಗಿರಲು||ಪ|| ಹಿಡಿದ ಕಿಚ್ಚು ಸುಡದಲೆ ಬಿಡುವುದೇನಣ್ಣ| ಬಿಡದೆ ಬಾಯಿಯನು ಬಡಿದುಕೊಳ್ಳುತಿರಲು||ಅ.ಪ|| ನೋಡದೆ ತಂದೆತಾಯಿಗಳ |ಕೂಡಿಟ್ಟೆ ಧನ ಕನಕ ಹೊಣೆ-| ಗೇಡಿತನದಿ ಕಡು ಕೃಪಣನೆನಿಸಿ| ಬಡತನವು ಬರಸೆಳೆದು| ಹಿಡಿದಪ್ಪಿಕೊಂಬಾಗ ಸಲೆ| ಕಡಲೊಡೆಯ ನಿನ್ನ ಕರೆದು ಪರಿಯೊಳಗೆ ||ಬೇಡಿ|| ಸಜ್ಜನರ ಸಂಗ ಮಾಡದೆ | ದುರ್ಜನರ ಕೂಟ ಸೇರಿ | ಮೋಜಿನ ಜೀವನವ ನಾನು ಕಳೆದು | ಜೂಜೆಂಬ ಕೂಪದಿ ಬಿದ್ದು| ನಿಜ ಬಣ್ಣವದು ತಿಳಿದಾಗ|| ಮೂಜಗದೊಡೆಯನಡಿಗೆ ಕೈಮುಗಿದು||ಬೇಡಿ|| ಅತಿ ವಿಷಯ ಭೋಗಂಗಳಲ್ಲಿ|ಮತಿಗೇಡಿತನವದೋರಿ | ಸತಿಸುತರ ಅಭಿಲಾಷೆ ಮಾಡುತಲಿ| ಗತಿಹೀನನಾಗಿ ಬೀಳಲು| ನಿತ್ಯ ನೀ ಗತಿಯೆಂದು ಸಿರಿ| ಮಾತರೀಶ ವಿಠಲನ ಪದತಲದಿ||ಬೇಡಿ||

ಐವತ್ತಾರು

  ಕಂಡೆನ್ನ ಬಾರೋ ಗಜಮುಖನೆ| ಉಂಡೆಯೊಡೆ ಚಕ್ಕುಲಿ ನಿನಗೀವೆ||ಪ|| ಹಿಂಡು ವಿಘ್ನಗಳ ಖಂಡಿಸಿ ನೀ| ಯಂಕುಶವಿಡಯ್ಯ ಏಕದಂತ||ಅ.ಪ||   ಕನಕ ಮಣಿ ಮುಕುಟ ಧರ | ಸಾನುರಾಗದಿ ಬಂದು | ಮುನ್ನಪೂಜೆಯನು ಗೊಂ | ಡೆನ್ನ ಮಾನಸಕೈದು | ಹೊನ್ನಿನುಡುಗೆ ಧರಿಸುತ | ಲೆನ್ನ ನೀನು ಪೊರೆದೆಯೊ | ಘನ್ನ ಮಹಿಮ ಗುಣ ಸಂ | ಪನ್ನನಾಗಿ ಮೆರೆಯುತ ||ಕಂಡೆನ್ನ|| ತಡಬಡಿಸಿ ಉಂಡು ನಿ | ನ್ನುದರವು ಬಿರಿಯುತಿರಲು | ಹಿಡಿದು ಪಣಿಯನುದರಕೆ | ಜಡಿದೆಳೆದುಕಟ್ಟುವುದ | ನೋಡಿ ಗಹಗಹಿಸಿದಾ | ಉಡುಪನಿಗೆ ನೀ ಕೋರೆ | ದಾಡೆಯನೆಳೆದವನ ಮು| ಸುಡಿಯ ಬಲು ಘಾತಿಸಿದೆ ||ಕಂಡೆನ್ನ||   ಪ್ರಥಮದೊಳು ಪೂಜಿಪರ | ಅತಿವಿಘ್ನಗಳುಯೆಲ್ಲ | ಸೋತುಪೋಗುವುದು ಭವ | ತತಿಗಳನು ಮೇಲಣದಿ | ಮುತ್ತಿಕೊಂಡಿಹ ಪಾಪ | ಗತಿಯಗೂಡುವುದೆಂಬ | ಮಾತರೀಶ ವಿಠಲನ | ಹಿತನುಡಿಗಳಿದ ಕೇಳಿ ||ಕಂಡೆನ್ನ||